

ದಾವಣಗೆರೆ: ಜೈಲಿನಿಂದ ತಪ್ಪಿಸಿಕೊಳ್ಳಲು 40 ಅಡಿ ಬೃಹತ್ ಗೋಡೆ ಹಾರಿ ಪರಾರಿಯಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಯೊಬ್ಬನನ್ನು ಕೇವಲ 24 ಗಂಟೆಗಳ ಅಂತರದಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಹೌದು.. ಅತ್ಯಾಚಾರ ಆರೋಪಿಯೊಬ್ಬ ಕಳೆದ ವಾರ ಕರ್ನಾಟಕದ ದಾವಣಗೆರೆ ಜೈಲಿನಿಂದ ತಪ್ಪಿಸಿಕೊಳ್ಳಲು 40 ಅಡಿ ಗಡಿ ಗೋಡೆ ಹಾರಿ ಪರಾರಿಯಾಗಿದ್ದ. ಈ ಘಟನೆ ಶುಕ್ರವಾರ ದಾವಣಗೆರೆ ಉಪ ಕಾರಾಗೃಹದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅತ್ಯಾಚಾರದ ಆರೋಪವನ್ನು ಎದುರಿಸುತ್ತಿರುವ 23 ವರ್ಷದ ಕೈದಿ ವಸಂತ್ - ಗೋಡೆಗೆ ಅಡ್ಡಲಾಗಿ ಹಾರಿ ಓಡಿಹೋಗುತ್ತಿರುವ ದೃಶ್ಯವು ಕ್ಯಾಮೆರಾದಲ್ಲಿ ಕಂಡುಬಂದಿದೆ.
‘ಉಪ ಕಾರಾಗೃಹದ ಗೋಡೆ ಜಿಗಿದಾಗ ಆರೋಪಿಯ ಕಾಲಿಗೆ ಪೆಟ್ಟುಬಿದ್ದರೂ, ಅಲ್ಲಿಂದ ಪರಾರಿಯಾಗಿದ್ದ. ಬಳಿಕ ದುಗ್ಗಾವತಿಯ ಸಂಬಂಧಿಕರ ಮನೆಯೊಂದರಲ್ಲಿ ಅಡಗಿದ್ದ. ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿ ಬಂಧಿಸಿ, ಮತ್ತೆ ಜೈಲಿಗೆ ಕಳುಹಿಸಲಾಗಿದೆ’ ಎಂದು ಇನ್ಸ್ಪೆಕ್ಟರ್ ಗುರುಬಸವರಾಜ್ ತಿಳಿಸಿದರು.
24 ಗಂಟೆಗಳಲ್ಲೇ ಬಂಧನ
ನಗರ ಹೊರವಲಯದ ಕರೂರ ಪ್ರದೇಶದ ನಿವಾಸಿ ವಸಂತ ಶನಿವಾರ ಜೈಲಿನಿಂದ ಪರಾರಿಯಾಗಿದ್ದ. ಬಸವನಗರ ಠಾಣೆಯ ಇನ್ಸ್ಪೆಕ್ಟರ್ ಗುರುಬಸವರಾಜ್ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಕಾನ್ಸ್ಟೆಬಲ್ ನಿಜಲಿಂಗಪ್ಪ ನೀಡಿದ ಖಚಿತ ಮಾಹಿತಿ ಆಧರಿಸಿ ಸಬ್ ಇನ್ಸ್ಪೆಕ್ಟರ್ ನಾಗರಾಜ ಮತ್ತು ಸಿಬ್ಬಂದಿಯು ಹರಿಹರ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಆರೋಪಿಯನ್ನು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಮಾರ್ಚ್ನಲ್ಲಿ ಹರ್ಯಾಣದ ಕುರುಕ್ಷೇತ್ರ ಜಿಲ್ಲಾ ಕಾರಾಗೃಹದಿಂದ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರದೇಶದಿಂದ ಮೂವರು ಕೈದಿಗಳು ಪರಾರಿಯಾಗಿದ್ದರು.