ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ, ಆತಂಕ ಬೇಡ ಎಚ್ಚರದಿಂದಿರಿ: ತಜ್ಞರು

ಮಹಾಮಾರಿ ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರಲಿದ್ದು, ಜನರು ಆತಂಕಕ್ಕೊಳಗಾಗದೆ ಎಚ್ಚರದಿಂದಿರಬೇಕೆಂದು ತಜ್ಞರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರಲಿದ್ದು, ಜನರು ಆತಂಕಕ್ಕೊಳಗಾಗದೆ ಎಚ್ಚರದಿಂದಿರಬೇಕೆಂದು ತಜ್ಞರು ಹೇಳಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯ ಡಾ.ರಜತ್ ಆತ್ರೇಯ ಅವರು ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಿಂದ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ಮೂರು ವರ್ಷಗಳಿಂದ ಕೊರೊನಾವೈರಸ್‌ನೊಂದಿಗೆ ವಾಸಿಸುತ್ತಿದ್ದೇವೆ. ಸಾಂಕ್ರಾಮಿಕ ಹಂತವನ್ನು ದಾಟಿದ್ದೇವೆ. ಸ್ಥಳೀಯ ಹಂತವನ್ನು ತಲುಪಿದ್ದೇವೆ. ಈ ಹಂತವನ್ನು ಮುಂಜಾಗ್ರತೆ ವಹಿಸುವ ಮೂಲಕ ಹಾಗೂ ಲಸಿಕೆ ಮೂಲಕ ಎದುರಿಸಬಹುದಾಗಿದೆ. ವೈರಸ್ ಗಳು ರೂಪಾಂತರಗೊಳ್ಳುತ್ತಲೇ ಇರುತ್ತವೆ. JN1 ನಂತಹ ಮತ್ತಷ್ಟು ಹೊಸ ರೂಪಾಂತರ ವೈರಸ್ ಗಳು ಬರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಹೊಸ ರೂಪಾಂತರ ವೈರಸ್ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೊಸ ರೂಪಾಂತರ ವೈರಸ್ ಪತ್ತೆಯಾಗಿರುವ ದೇಶಗಳಲ್ಲಿ ವೈರಸ್ ವೇಗಗತಿಯಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪತ್ತೆ ಮಾಡಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುವುದಿಲ್ಲ ಎಂತಲೂ ಹೇಳಿದೆ.

"60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವೃದ್ಧರು, ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಮುಚ್ಚಿದ, ಗಾಳಿ ಕಡಿಮೆ ಇರುವ ಸ್ಥಳಗಳು ಮತ್ತು ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಹೊರಗೆ ಹೋಗುವಾಗ ಮಾಸ್ಕ್ ಗಳನ್ನು ಧರಿಸಬೇಕು ಎಂದು ಹೇಳಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚೆಚ್ಚು ಜನರು ಸೇರುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದು ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆಗಳನ್ನು ಪಾಲನೆ ಮಾಡಬೇಕು. ರೋಗಲಕ್ಷಣಗಳನ್ನು ಹೊಂದಿರುವ ಜನರು ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com