ಮಣಿಪುರದಲ್ಲಿ ಹಿಂಸಾಚಾರ, ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ನಗರದಲ್ಲಿ ಪ್ರತಿಭಟನೆ

ಕಳೆದ ಎರಡೂವರೆ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ-ಅತ್ಯಾಚಾರ ಖಂಡಿಸಿ ಶುಕ್ರವಾರ ನಗರದ ಟೌನ್ ಹಾಲ್ ಎದುರು ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಜಸ್ಟಿಸ್ ಫಾರ್ ಮಣಿಪುರ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು.
ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಗರದ ವಿದ್ಯಾರ್ಥಿಗಳು.
ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಗರದ ವಿದ್ಯಾರ್ಥಿಗಳು.

ಬೆಂಗಳೂರು: ಕಳೆದ ಎರಡೂವರೆ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ-ಅತ್ಯಾಚಾರ ಖಂಡಿಸಿ ಶುಕ್ರವಾರ ನಗರದ ಟೌನ್ ಹಾಲ್ ಎದುರು ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಜಸ್ಟಿಸ್ ಫಾರ್ ಮಣಿಪುರ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು.

ಬೆಂಗಳೂರಿನಲ್ಲಿ ಟೌನ್ ಹಾಲ್‌ನ ಹೊರಗೆ ಜಮಾಯಿಸಿದ ಜನರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ, ಸಂವಿಧಾನ ಉಳಿಸಿ – ಹೆಣ್ಣನ್ನು ರಕ್ಷಿಸಿ, ಆಳುವವರು ಅಳಿಸುತ್ತಿದ್ದಾರೆ, ಮಣಿಪುರದ ಜನರಿಗಾಗಿ ನಮ್ಮ ಮೌನ ಕಣ್ಣೀರು ಹೆಸರಿನ ಬಿತ್ತಿ ಫಲಕಗಳನ್ನು ಹಿಡಿದು, ಮಣಿಪುರದಲ್ಲಿ ಶಾಂತಿಗಾಗಿ ಒತ್ತಾಯಿಸಿ ಪ್ರತಿಭಟಿಸಿದರು.

ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್'ನ ಸದಸ್ಯೆ ವಿಮಲಾ ಕೆಎಸ್ ಅವರು ಮಾತನಾಡಿ, ಮೇ.4 ರಂದು ಮಣಿಪುರದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಎಲ್ಲಿ ಹೋಗಿದ್ದರು? ಇಬ್ಬರೂ ಕರ್ನಾಟಕದಲ್ಲಿ ಮತಯಾಚಿಸುವಲ್ಲಿ ಬಿಝಿಯಾಗಿದ್ದರು. ವಿವಿಧ ದೇಶಗಳಿಗೆ ಭೇಟಿ ನೀಡಲು ಮೋದಿಯವರಿಗೆ ಸಮಯವಿತ್ತು. ಆದರೆ, ಮಣಿಪುರದ ಹಿಂಸಾಚಾರ ಕುರಿತು ಪ್ರತಿಕ್ರಿಯೆ ನೀಡಲು ಅವರಿಗೆ ಸಮಯವಿರಲಿಲ್ಲ. ಭೇಟಿ ಪಡಾವೋ, ಭೇಟಿ ಬಚಾವೋ ಮತ್ತು ಮಹಿಳಾ ಸಬಲೀಕರಣ ಕೇವರ ಕಣ್ಣೊರೆಸುವ ತಂತ್ರವಷ್ಟೇ ಎಂದು ಕಿಡಿಕಾರಿದರು.

ನಗರದಲ್ಲಿ ನೆಲೆಸಿರುವ ಮಣಿಪುರದ ಮೈತೆ ಸಮುದಾಯ ಡಯಾನಾ ಕೆಎಚ್ ಮಾತನಾಡಿ, ಪ್ರತಿಯೊಬ್ಬರು ಮೊದಲು ನಮ್ಮನ್ನು ಮನುಷ್ಯರಂತೆ ನೋಡಬೇಕೆಂದು ಬಯಸುತ್ತೇವೆ. ಎರಡೂ ಸಮುದಾಯಗಳ ಕ್ರಮಗಳನ್ನು ಖಂಡಿಸುತ್ತೇನೆ. ಅನ್ಯಾಯ ಮತ್ತು ಹಿಂಸಾಚಾರವನ್ನು ಸಾಮಾನ್ಯವಾಗಬಾರದು. ಮಣಿಪುರದ ಈಗಿನ ಪರಿಸ್ಥಿತಿಗೆ ನನ್ನ ಹೃದಯ ಭಾರವಾಗುತ್ತಿದೆ ಎಂದು ಹೇಳಿದ್ದಾರೆ.

ಬೃಂದಾ ಅಡಿಗೆ ಎಂಬುವವರು ಮಾತನಾಡಿ, ಮಣಿಪುರದ ಎರಡೂ ಸಮುದಾಯಗಳಲ್ಲಿನ ಮಹಿಳೆಯರು, ಮಕ್ಕಳು ಮತ್ತು ಪುರುಷರ ಮೇಲಿನ ಅಪರಾಧಗಳು ಮಣಿಪುರವನ್ನು ಅಸುರಕ್ಷಿತವಾಗಿಸಿದೆ. ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮಹಿಳೆಯರು ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಣಿಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಮರುಸ್ಥಾಪಿಸಬೇಕು. ಹಿಂಸಾಚಾರ ನಿಯಂತ್ರಿಸಲು ವಿಫಲರಾದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು. ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂಬ ಎಂಬ ಆಗ್ರಹಗಳು ಪ್ರತಿಭಟನೆ ವೇಳೆ ಕೇಳಿ ಬಂದವು.

ಬೆಂಗಳೂರು ಅಷ್ಟೇ ಅಲ್ಲದೆ, ಮೈಸೂರು ಮತ್ತು ಮಂಗಳೂರಿನಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದವು.

ಮಡಿಕೇರಿ ಕಾಂಗ್ರೆಸ್ ವಕ್ತಾರ ಎಸಿ ವಿನಯರಾಜ್ ಅವರು ಮಾತನಾಡಿ, ಮಹಿಳೆಯರ ರಕ್ಷಣೆಗೆ ಬಿಜೆಪಿ ಹಠಾವೋ, ಬೇಟಿ ಬಚಾವೋ ಎಂಬ ಹೊಸ ಘೋಷಣೆಯ ಅಗತ್ಯವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com