ನಗರದಲ್ಲಿ ವರುಣನ ಅಬ್ಬರ: 255 ಮರ , 1050 ಕ್ಕೂ ಹೆಚ್ಚು ಕೊಂಬೆಗಳು ಧರೆಗೆ; ತ್ವರಿತ ತೆರವಿಗೆ ಬಿಬಿಎಂಪಿ ಸೂಚನೆ

ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಸುರಿದ ಮಳೆ ಮತ್ತು ಗಾಳಿಯ ಪರಿಣಾಮ 255 ಮರಗಳು ಹಾಗೂ ಸುಮಾರು 1050 ಕೊಂಬೆಗಳು ಮತ್ತು ಕೊಂಬೆಗಳು ಧರೆಗುರುಳಿದ್ದು, ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆ.
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಸುರಿದ ಮಳೆ ಮತ್ತು ಗಾಳಿಯ ಪರಿಣಾಮ 255 ಮರಗಳು ಹಾಗೂ ಸುಮಾರು 1050 ಕೊಂಬೆಗಳು ಮತ್ತು ಕೊಂಬೆಗಳು ಧರೆಗುರುಳಿದ್ದು, ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿವೀಕ್ಷಣೆ ಮಾಡಿದ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಪರಿಹಾರ ಕಾರ್ಯದ ಬಗ್ಗೆ ಮಾಹಿತಿ ಪಡೆದರು.

ಮೊದಲಿಗೆ ಅವರು ಪಶ್ಚಿಮ ವಲಯದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಾರಿ ಮಳೆಯಿಂದ ಬಿದ್ದಿರುವ ಮರ ಹಾಗೂ ಮರದ ಕೊಂಬೆಗಳನ್ನು ಪಾಲಿಕೆಯ ಅರಣ್ಯ ಇಲಾಖೆ ವತಿಯಿಂದ ತಂಡ ರಚಿಸಿ ಕ್ರೇನ್‌ಗಳ ಮೂಲಕ ನಡೆಸಲಾಗುತ್ತಿರುವ ತೆರವು ಕಾರ್ಯಚಾರಣೆ ಪರಿಶೀಲಿಸಿದರು. ಮರದ ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗೆ ಬಿದ್ದ ಎಲ್ಲಾ ಮರಗಳು ಮತ್ತು ಕೊಂಬೆಗಳನ್ನು ಈಗಾಗಲೇ ತೆರವುಗೊಳಿಸಲಾಗುತ್ತಿದೆ. ಉಳಿದಿರುವ ಸ್ವಲ್ಪ ಪ್ರಮಾಣದ ಕೊಂಬೆಗಳನ್ನು ಬಹುಬೇಗನೆ ತೆರವುಗೊಳಿಸಲಾಗುವುದು ಎಂದು ಇದೇ ವೇಳೆ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನ ಸಿಕ್ಕಲಿಗರ್ ಆಯುಕ್ತರಿಗೆ ಮಾಹಿತಿ ನೀಡಿದರು.

ನಂತರ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರೆಕೆರೆ ಹಾಗೂ ಆರ್‌ಬಿಐ ಲೇಔಟ್ ಗೆ ಭೇಟಿ ನೀಡಿದರು.

ರಸ್ತೆ ಅಕ್ಕಪಕ್ಕದಲ್ಲಿ ಬಿದ್ದ ಮರದ ಕೊಂಬೆಗಳನ್ನು ಖಾಸಗಿ ಸಿಬ್ಬಂದಿಗಳನ್ನು ನೇಮಿಸಿ ತ್ವರಿತಗತಿಯಲ್ಲಿ ತೆರವುಗೊಳಿಸಿ. ಇಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಯಾವುದೇ ಪ್ರಾಣಾಪಾಯ ಇಲ್ಲದಂತೆ ತೆರವು ಕಾರ್ಯ ನಡೆಸಲು ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ಇದೇ ಕ್ಷೇತ್ರದಲ್ಲಿನ ವಾರ್ಡ್ 188ರ ಬೆಳಕಾನಹಳ್ಳಿಯ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಮಳೆಯಿಂದ ಬೃಹತ್ ನೀರುಗಾಲುವೆಯು ಉಕ್ಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಿದು ತೊಂದರೆ ಉಂಟು ಮಾಡಿತ್ತು.

ಆ ಬಗ್ಗೆ ಖುದ್ದು ಭೇಟಿ ನೀಡಿದ ಅವರು, ತಕ್ಷಣವೇ ಬೃಹತ್ ನೀರುಗಾಲುವೆಯಿಂದ ಉಕ್ಕಿ ಹರಿದಿರುವುದರಿಂದ ಪ್ರದೇಶದಲ್ಲಿ ಬಿದ್ದಿರುವ ಡೆಬರೀಸ್ ಅನ್ನು ತೆರವು ಗೊಳಿಸಲು ಸೂಚಿಸಿದರು. ಮತ್‌ತೆ ಮಳೆ ಬಂದಾಗ ನೀರುಗಾಲುವೆ ಉಕ್ಕಿ ಹರಿಯದಂತೆ ಕ್ರಮ ಕೈಗೊಳ್ಳುವ ಬಗ್ಗೆ ಸ್ಥಳಿಯರಿಗೆ ಭರವಸೆ ನೀಡಿದರು.

ಈ ವೇಳೆ ಬೊಮ್ಮನಹಳ್ಳಿ ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್.ಕೆ, ಮುಖ್ಯ ಅಭಿಯಂತರರು (ಬೃಹತ್ ನೀರುಗಾಲುವೆ) ಬಸವರಾಜ್ ಕಬಾಡೆ, ಮುಖ್ಯ ಅಭಿಯಂತರರು (ಬೊಮ್ಮನಹಳ್ಳಿ ವಲಯ) ಶಶಿಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com