

ಬೆಂಗಳೂರು: ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿ ಹಳಿತಪ್ಪಿದ್ದ ರೀ ರೈಲ್ (ಆರ್‌ಆರ್‌ವಿ) ವಾಹನವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆರವು ಮಾಡಲಾಗಿದೆ.
ಆ ಮೂಲಕ ಬೆಳಗ್ಗೆಯಿಂದ ಹಸಿರು ಮಾರ್ಗದಲ್ಲಿ ಸ್ಥಗಿತವಾಗಿದ್ದ ಮೆಟ್ರೋ ರೈಲು ಸಂಚಾರ ಮಧ್ಯಾಹ್ನ 3.40ರಿಂದ ಪುನಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ನಮ್ಮ ಮೆಟ್ರೋ ಇಎ-ಪಿಪಿಆರ್ ಶ್ರೀವಾಸ್ ರಾಜಗೋಪಾಲನ್ ಅವರು, ಇಂದು ಗ್ರೀನ್ ಲೈನ್‌ನಲ್ಲಿ ಮೆಟ್ರೋ ಸೇವೆಗಳ ಅಡಚಣೆಯ ಕುರಿತು ಮಾಧ್ಯಮ ಬಿಡುಗಡೆಯಾಗಿದೆ. ವಿವರಗಳು ಮಾಧ್ಯಮ ಪ್ರಕಟಣೆಯಲ್ಲಿವೆ. 15.40 ಗಂಟೆಯಿಂದ ಸಹಜ ಸ್ಥಿತಿಗೆ ಮರಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಹಳಿ ದುರಸ್ತಿಗೆ ತೆರಳುತ್ತಿದ್ದ ವೇಳೆ, ಆರ್ ಆರ್ ವಿ ವಾಹನವು ಹಳಿ ತಪ್ಪಿತ್ತು. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಬಳಸುವ ರೀ ರೈಲ್ ರಾಜಾಜಿನಗರ ನಿಲ್ದಾಣದ ತಿರುವಿನಲ್ಲಿ ಹಳಿ ತಪ್ಪಿದ ಪರಿಣಾಮ ಈ ಸಮಸ್ಯೆ ಎದುರಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಮ್ಮ ಮೆಟ್ರೊ ಪ್ರಯಾಣಿಕರು ಪರದಾಡಿದ್ದರು. ಯಶವಂತಪುರದಿಂದ ಮಂತ್ರಿ ಸ್ಕ್ವೇರ್ ವರೆಗೆ ಒಂದು ಮಾರ್ಗದಲ್ಲಿ ಮಾತ್ರ ಅರ್ಧ ಗಂಟೆಗೆ ಒಮ್ಮೆ ಮೆಟ್ರೊ ಸಂಚಾರವಿತ್ತು.
ಇದರಿಂದ ನಿಗದಿತ ಸಮಯಕ್ಕೆ ಪ್ರಯಾಣಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದರು. ಯಶವಂತಪುರ ರೈಲ್ವೆ ನಿಲ್ದಾಣ ಸಮೀಪದಿಂದ ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿತ್ತು. ಮೆಟ್ರೊ ರೈಲು ಮಾರ್ಗದಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಈ ವಾಹನ ಬಳಸಲಾಗುತ್ತದೆ. ಸೋಮವಾರ ಮಧ್ಯರಾತ್ರಿ ರಾಜಾಜಿನಗರದ ಸಮೀಪ ಸಂಚರಿಸುತ್ತಿದ್ದಾಗ ಈ ವಾಹನ ಹಳಿತಪ್ಪಿ ಸಮಸ್ಯೆ ಉಂಟಾಗಿತ್ತು.