ಬಿಎಂಟಿಸಿ ಬಸ್ ಹರಿದು 4 ವರ್ಷದ ಬಾಲಕಿ ಸಾವು

ಶಾಲೆಗೆ ತೆರಳುತ್ತಿದ್ದ ವೇಳೆ ಬಿಎಂಟಿಸಿ ಬಸ್ ಹರಿದು ನಾಲ್ಕೂವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಉತ್ತರಹಳ್ಳಿ ಸಮೀಪದ ಸುಬ್ರಹ್ಮಣ್ಯಪುರ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಶಾಲೆಗೆ ತೆರಳುತ್ತಿದ್ದ ವೇಳೆ ಬಿಎಂಟಿಸಿ ಬಸ್ ಹರಿದು ನಾಲ್ಕೂವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಉತ್ತರಹಳ್ಳಿ ಸಮೀಪದ ಸುಬ್ರಹ್ಮಣ್ಯಪುರ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಪದ್ಮಾವತಿ ಸಿಲ್ಕ್ ಶೋರೂಂ ಬಳಿ ಬಾಲಕಿಯ ತಂದೆ ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮೃತ ಬಾಲಕಿಯನ್ನು ಪೂರ್ವಿ ರಾವ್ ಎಂದು ಗುರುತಿಸಲಾಗಿದೆ. ಬಾಲಕಿ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಪ್ರೀ ಕೆಜಿ ಓದುತ್ತಿದ್ದು, ತಂದೆ ಪ್ರಸನ್ನ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗ ಹೊಂದಿದ್ದಾರೆ. ಪ್ರಸನ್ನ ಅವರು, ಪ್ರತಿನಿತ್ಯ ಮಗಳನ್ನು ಶಾಲೆಗೆ ಬಿಟ್ಟು ಬಳಿಕ ಕೆಲಸಕ್ಕೆ ತೆರಳುತ್ತಿದ್ದರು. ಇದರಂತೆ ನಿನ್ನೆ ಕೂಡ ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದರು.

ಈ ವೇಳೆ, ಸುಬ್ರಹ್ಮಣ್ಯಪುರ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್,  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಾಲಕಿ ಕೆಳಗೆ ಬಿದ್ದಿದ್ದು, ಬಸ್ಸಿನ ಚಕ್ರದಡಿಗೆ ಸಿಲುಕಿದ್ದಾಳೆ. ಕೂಡಲೇ ಸ್ಥಳೀಯರು ಬಾಲಕಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿರುವುದು ತಿಳಿದುಬಂದಿದೆ.

ಬಸ್ ಕೆ.ಆರ್.ಮಾರುಕಟ್ಟೆಯಿಂದ ವಸಂತಪುರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಬಸ್ ಚಾಲಕ ಬಸವರಾಜ ಪಿ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com