ಏರೋ ಇಂಡಿಯಾ-2023: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ
ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ.
Published: 13th February 2023 09:42 AM | Last Updated: 13th February 2023 06:56 PM | A+A A-

ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ.
ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ.
5 ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವನ್ನು ಮೋದಿಯವರು 2ನೇ ಬಾರಿ ಉದ್ಘಾಟಿಸಿದ್ದಾರೆ. ಮುಂದಿನ 5 ದಿನಗಳ ಕಾಲ ಸಿಲಿಕಾನ್ ಸಿಟಿಯ ನಭದಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಿರಲಿದೆ. 2015ರಲ್ಲೂ ಮೋದಿಯವರು ಏರೋ ಇಂಡಿಯಾವನ್ನು ಉದ್ಘಾಟಿಸಿದ್ದರು.
ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ
ಏರೋ ಇಂಡಿಯಾಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿಯವರು ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು.
ಆವೃತ್ತಿಯಿಂದ ಆವೃತ್ತಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಏರೋ ಇಂಡಿಯಾ ಈ ಬಾರಿಯೂ ತನ್ನ ಪ್ರದರ್ಶನ ವ್ಯಾಪ್ತಿಯನ್ನು ಶೇ.3ರಷ್ಟು ವಿಸ್ತಾರಗೊಳಿಸಿಕೊಂಡಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಬರುವ ನಿರೀಕ್ಷೆಗಳಿವೆ.
ಇದನ್ನೂ ಓದಿ: ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ: ಸಿಎಂ ಬೊಮ್ಮಾಯಿ
#WATCH | Air show displayed at the 14th edition of #AeroIndia2023 at Air Force Station, Yelahanka in Bengaluru, Karnataka.
— ANI (@ANI) February 13, 2023
Prime Minister Narendra Modi present at the event.
(Source: DD) pic.twitter.com/DX5u0TYu7r
2021ರಲ್ಲಿ ನಡೆದ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ 600 ಮಂದಿ ಪ್ರದರ್ಶಕರು ಭಾಗವಹಿಸಿದ್ದರು. ಈ ಸಂಖ್ಯೆ ಪ್ರಸಕ್ತ ವೈಮಾನಿಕ ಪ್ರದರ್ಶನದಲ್ಲಿ 809ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ 55 ರಾಷ್ಟ್ರಗಳು ಮಾತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರಸ್ತುತ 98 ರಾಷ್ಟ್ರಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಒಟ್ಟು 251 ಒಡಂಬಡಿಕೆ ಸಿದ್ಧಗೊಂಡಿದ್ದು, ಕಳೆದ ವರ್ಷ 23 ಸಾವಿರ ಚದರ ಮೀಟರ್ ವ್ಯಾಪ್ತಿಗೆ ಸೀಮಿತವಾಗಿದ್ದ ಪ್ರದರ್ಶನ ವ್ಯವಸ್ಥೆಯು ಈ ಬಾರಿ 35,000 ಚದರ ಮೀಟರ್ ವ್ಯಾಪ್ತಿಗೆ ವಿಸ್ತರಿಸಿದೆ.
ಕಳೆದ ಬಾರಿ 67 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದ್ದವು. ಈ ಬಾರಿ ಸಾರಂಗ್, ಸೂರ್ಯಕಿರಣ್ ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೇಲ್, ತೇಜಸ್ ಸೇರಿದಂತೆ ಒಟ್ಟು 67 ವಿಮಾನಗಳು ಪ್ರದರ್ಶನ ನೀಡಲಿವೆ. ಉಳಿದಂತೆ ಸ್ವ್ಯಾಟಿಕ್ ಡಿಸ್ ಪ್ಲೇಯಲ್ಲಿ 36 ವಿಮಾನಗಳು ಪ್ರದರ್ಶನಗೊಳ್ಳಲಿವೆ.
ಇದನ್ನೂ ಓದಿ: ಏರೋ ಇಂಡಿಯಾ 2023: ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ: ರಾಜನಾಥ್ ಸಿಂಗ್
ಭಾರತ ನಿರ್ಮಿತ ಯುದ್ಧ ವಿಮಾನ, ಹೆಲಿಕಾಪ್ಟರ್ ಹಾಗೂ ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕವಾಗಿ ಇಂಡಿಯನ್ ಪೆವಿಲಿಯನ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 115 ಕಂಪನಿಗಳು ಹಾಗೂ 227 ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ 149 ಉತ್ಪನ್ನಗಳನ್ನು ಭೌತಿಕವಾಗಿಯೇ ಪ್ರದರ್ಶಿಸಲಾಗುತ್ತಿದೆ.