ನಮ್ಮ ಮೆಟ್ರೋ: ಸುರಂಗ ಕೊರೆಯುವ ಬೃಹತ್ ಯಂತ್ರಗಳ ನಿಯಂತ್ರಿಸುವ ದಿಟ್ಟ ಮಹಿಳೆಯರು ಇವರು!

ಬದಲಾಗುತ್ತಿರುವ ಪ್ರಪಂಚದಲ್ಲಿ ಮಹಿಳೆಯರು ಕೇವಲ ಮನೆಗೆ ಅಥವಾ ಉದ್ಯೋಗಕ್ಕಷ್ಟೇ ಸೀಮಿತರಾಗಿಲ್ಲ, ಸಮಾಜ ಸೇವೆ ಮತ್ತು ದೇಶ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಡಿಜಿಟಲ್‌ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ.
ಮೆಟ್ರೋ ಸುರಂಗ ಮಾರ್ಗದಲ್ಲಿ  ಕಾರ್ಯನಿರ್ವಹಿಸುತ್ತಿರುವ ಎ.ಗೌರಿ ಮತ್ತು ಬಿವಿ ಮಧು.
ಮೆಟ್ರೋ ಸುರಂಗ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಗೌರಿ ಮತ್ತು ಬಿವಿ ಮಧು.
Updated on

ಬೆಂಗಳೂರು: ಬದಲಾಗುತ್ತಿರುವ ಪ್ರಪಂಚದಲ್ಲಿ ಮಹಿಳೆಯರು ಕೇವಲ ಮನೆಗೆ ಅಥವಾ ಉದ್ಯೋಗಕ್ಕಷ್ಟೇ ಸೀಮಿತರಾಗಿಲ್ಲ, ಸಮಾಜ ಸೇವೆ ಮತ್ತು ದೇಶ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಡಿಜಿಟಲ್‌ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ.

ನಗರದ ಈ ಇಬ್ಬರು ದಿಟ್ಟ ಮಹಿಳೆಯರು ಸುರಂಗ ಕೊರೆಯುವ ಬೃಹತ್ ಯಂತ್ರ (ಟಿಬಿಎಂ)ಗಳ ನಿಯಂತ್ರಿಸುವ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಇತರರಿಗೆ ಪ್ರೇರಣೆಯಾಗಿದ್ದಾರೆ.  

ಸುರಂಗ ಕೊರೆಯುವ ಯಂತ್ರಗಳು ಭಾರೀ ಶಬ್ಧವನ್ನು ಮಾಡುವುದು ಸಾಮಾನ್ಯ. ಆದರೆ, ಈ ಮಹಿಳಾ ಮಣಿಗಳು ಅವುಗಳನ್ನು ನಿಯಂತ್ರಿಸುವ, ಶಬ್ಧ ಮಾಡದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಡೈರಿ ಸರ್ಕಲ್‌ನಲ್ಲಿ 60 ಅಡಿ ಆಳದಲ್ಲಿ ಈ ಮಹಿಳೆಯರು ಕಳೆದ 10 ತಿಂಗಳಿನಿಂದಲೂ ಯಂತ್ರಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ.

ಎ ಗೌರಿ (44) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಬಿ ವಿ ಮಧು (39) ಸಹಾಯಕ ಎಂಜಿನಿಯರ್ ಭೂಗರ್ಭದಲ್ಲಿ ನಿಂತು ಸವಾಲಿನ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಇಬ್ಬರು ಅವಳಿ ಗಂಡು ಮಕ್ಕಳ ತಾಯಿಯಾಗಿರುವ ಗೌರಿ ಅವರು. 2007ರಿಂದಲೂ ಬಿಎಂಆರ್'ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜಪಾನ್‌ ಮೂಲದ ಮಾಜಿ ಮುಖ್ಯ ಸುರಂಗ ತಜ್ಞೆ ತೇಜುಕಾ ನಮಗೆ ಪ್ರೇರಣೆಯಾಗಿದ್ದಾರೆ. ತೇಜುಕಾ ಅವರು ಮೆಟ್ರೋ ಮೊದಲ ಹಂತದ ಸುರಂಗ ಕೊರೆಯುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೌರಿ ಹೇಳಿದ್ದಾರೆ.

ತಿರುಚಿರಾಪಳ್ಳಿ ಮೂಲದ ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಗೌರಿ ಅವರು, ವಿವಾಹದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುರಂಗ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದ ಇವರು, ಅವಕಾಶಕ್ಕಾಗಿ ಹುಡುಕಾಟ ನಡೆಸಿದ್ದರು. ತಮ್ಮ ಇಚ್ಛೆಯಂತೆಯೇ 2022ರ ಮೇ ತಿಂಗಳಿನಲ್ಲಿ ಸುರಂಗ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಅನುಮತಿ ಪಡೆದುಕೊಂಡಿದ್ದರು.

ನನಗೆ ಅವಕಾಶ ನೀಡಿದ ಮುಖ್ಯ ಇಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ ಮತ್ತು ಉಪ ಸಿವಿಲ್ ಇಂಜಿನಿಯರ್ ರಾಘವೇಂದ್ರ ಶಾನಭಾಗ್ ಅವರಿಗೆ ನಾನು ಆಭಾರಿಯಾಗಿದ್ದೇನೆ" ಎಂದು ಗೌರಿ ಹೇಳಿದ್ದಾರೆ.

ನಮ್ಮ ಕೆಲಸ ದೈಹಿಕ ಚುರುಕುತನಕ್ಕಿಂತ ಮಿದುಳಿನ ಚುರುಕತನದ ಅಗತ್ಯವಿರುತ್ತದೆ. ಎಲ್ಲ ಮಹಿಳೆಯರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಆದರೆ, ಅದಕ್ಕೆ ಕನಸಿನ ಮೇಲೆ ಕೇಂದ್ರೀಕರಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ನನ್ನ ಪತಿ ವಿ. ಆನಂದ್ ಅವರು ನನಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಾರೆ. ನಾನು ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆಗಳ ಕಾಲ ಕೆಲಸ ಮಾಡಿದ ದಿನಗಳೂ ಇವೆ ಎಂದು ತಿಳಿಸಿದ್ದಾರೆ.

ಇನ್ನು ಮಧು ಅವರು ಶಿವಮೊಗ್ಗ ಮೂಲದವರಾಗಿದ್ದು, ನಿರ್ಮಾಣ ತಂತ್ರಜ್ಞಾನದಲ್ಲಿ ಎಂಟೆಕ್ ಮಾಡಿದ್ದಾರೆ. ಇವರಿಗೆ 11 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದು, ಪತಿ ಎ ಸತ್ಯನಾರಾಯಣ ರಾಮನಗರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಧು ಅವರು 2019ರಿಂದಲೂ ಬಿಎಂಆರ್'ಸಿಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಉದ್ಯೋಗ ದೊರಕಿದ ದಿನವೇ ನನಗೆ ತಿಳಿದಿದ್ದು, ಇನ್ನು ಜೀವನದುದ್ದಕ್ಕೂ ನಾನು ಕೆಲಸ ಮಾಡುವ ನೌಕರಿ ಇದೇ ಎಂದು. ನನ್ನೊಂದಿಗೆ ಕೆಲಸ ಮಾಡುವ ನನ್ನ ಪುರುಷ ಸಹೋದ್ಯೋಗಿಗಳು ಬಹಳ ಬೆಂಬಲ ನೀಡುತ್ತಾರೆ. ಟಿಬಿಎಂ ಸರಾಗವಾಗಿ ಚಲಿಸುತ್ತಿದೆಯೇ ಎಂದು ನಾವು ಆಗಾಗ ಪರಿಶೀಲಿಸುತ್ತೇವೆ. ಪ್ರತಿ ನಾಲ್ಕೈದು ರಿಂಗ್‌ಗಳ ನಂತರ ನಾವು ಕಟ್ಟರ್‌ಗಳನ್ನು ಪರಿಶೀಲಿಸುತ್ತೇವೆ. ಸುರಂಗದಲ್ಲಿ ಶೌಚಾಲಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಒಮ್ಮೆ ಸುರಂಗದೊಳಗೆ ಇಳಿದಾಗ ಯಂತ್ರಗಳ ಪರಿಶೀಲನೆಗೆ 1-2 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ಹೀಗಾಗಿ ಸುರಂಗದೊಳಗೆ ಇಳಿಯುವುದಕ್ಕೂ ಮುನ್ನ ಕೆಲಕಾಲ ವಿಶ್ರಾಂತಿ ಪಡೆದುಕೊಳ್ಳುತ್ತೇವೆಂದು ಮಧು ಹೇಳಿದ್ದಾರೆ.

ಇಬ್ಬರು ಮಹಿಳೆಯರ ಕಾರ್ಯ ಶ್ಲಾಘನೀಯವಾದದ್ದು. ಉತ್ಸಾಹ ಹಾಗೂ ಕಾರ್ಯಮಗ್ನತೆಯಿಂದ ಹೆಚ್ಚಿನ ಮಹಿಳೆಯರು ಸುರಂಗ ಮಾರ್ಗದಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಸಂತಸವನ್ನು ತಂದಿದೆ ಎಂದು ಉಪ ಸಿವಿಲ್ ಎಂಜಿನಿಯರ್ ರಾಘವೇಂದ್ರ ಶಾನಭಾಗ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com