ಇಸ್ರೇಲ್ ಮೇಲೆ ಉಗ್ರರ ಅಟ್ಟಹಾಸ: ಸಂಕಷ್ಟದಲ್ಲಿ ಮಂಗಳೂರಿಗರು, ಹೆಚ್ಚಿದ ಆತಂಕ!

ಇಸ್ರೇಲ್‌ನ ಜೆರುಸಲೇಂ, ಟೆಲ್ ಅವೀವ್, ಹೆರ್ಜ್ಲಿಯಾ, ನೆತನ್ಯಾ, ರಮ್ಲಾ, ಹಶರೋನ್ ನಗರಗಳಲ್ಲಿ ಮಂಗಳೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಈ ನಗರಗಳಿಗೆ ಹಮಾಸ್ ಉಗ್ರರ ಪ್ರವೇಶವಾಗಿದೆ ಎಂಬ ಸುದ್ದಿ ಕನ್ನಡಿಗರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಇಸ್ರೇಲ್‌ನ ಜೆರುಸಲೇಂ, ಟೆಲ್ ಅವೀವ್, ಹೆರ್ಜ್ಲಿಯಾ, ನೆತನ್ಯಾ, ರಮ್ಲಾ, ಹಶರೋನ್ ನಗರಗಳಲ್ಲಿ ಮಂಗಳೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಈ ನಗರಗಳಿಗೆ ಹಮಾಸ್ ಉಗ್ರರ ಪ್ರವೇಶವಾಗಿದೆ ಎಂಬ ಸುದ್ದಿ ಕನ್ನಡಿಗರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.

ನಾನು ಕಳೆದ 9 ವರ್ಷಗಳಿಂದ ಟೆಲ್ ಅವೀವ್‌ನಲ್ಲಿ ನೆಲೆಯೂರಿದ್ದೇನೆ. ಆದರೆ, ಎಂದಿಗೂ ಉಗ್ರಗಾಮಿಗಳು ಇಸ್ರೇಲ್‌ಗೆ ಪ್ರವೇಶಿಸಿ ನಾಗರಿಕರನ್ನು ಕೊಂದು ಅಪಹರಣ ಮಾಡುತ್ತಿರುವುದನ್ನು ನೋಡಿರಲಿಲ್ಲ, ಕೇಳಿರಲಿಲ್ಲ. ಈವರೆಗೂ ಉಗ್ರರು ಕೇವಲ ರಾಕೆಟ್‌ಗಳಿಂದ ದಾಳಿ ನಡೆಸಿದ್ದರು. ಆದರೀಗ ಕಟ್ಟಡಗಳಲ್ಲಿ ನುಗ್ಗಲು ಶುರು ಮಾಡಿದ್ದಾರೆಂಬ ವದಂತಿಗಳು ಹರಡಿವೆ. ಇದು ಆತಂಕ ಸೃಷ್ಟಿಸುತ್ತಿದೆ. ನಾನಿರುವ ಕಟ್ಟಡದಲ್ಲಿಯೂ ಗುಂಡಿನ ಚಕಮಕಿ ನಡೆಯುತ್ತಿರುವುದು ಹಾಗೂ ಕ್ಷಿಪಣಿಗಲನ್ನು ತಡೆಯುತ್ತಿರುವುದು ಕಂಡು ಬರುತ್ತಿದೆ ಎಂದು ಮಂಗಳೂರು ಮೂಲಕ ಲೆಸ್ಟರ್ ಎಂಬುವವರು ಹೇಳಿದ್ದಾರೆ.

ಹರ್ಜ್ಲಿಯಾದಲ್ಲಿ ಕೇರ್‌ಟೇಕರ್ ಆಗಿರುವ ಮಂಗಳೂರಿನ ಗಾಡ್ವಿನ್ ಎಂಬುವವರು ಮಾತನಾಡಿ, ನಾನಿರುವ ಸ್ಥಳದಲ್ಲಿ ಆಗಾಗ್ಗೆ ಸೈರನ್‌ಗಳು ಕೇಳಿ ಬರುತ್ತಿದೆ. ಕ್ಷಿಪಣಿಯ ಒಂದು ಭಾಗ ನಾನಿರುವ ಕಟ್ಟಡದ ಸಮೀಪ ಬಿದ್ದಿದೆ. ಕಾಲ ಕಳೆಯುತ್ತಿದ್ದಂತೆ ಇಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ. ಉಗ್ರರು ಅಡಗಿ ಕುಳಿತಿರುವ ಸುದ್ದಿ ತಿಳಿದ ಪೊಲೀಸರು ಗಸ್ತು ತೀವ್ರಗೊಳಿಸಿದ್ದಾರೆಂದು ತಿಳಿಸಿದ್ದಾರೆ.

ಟೆಲ್ ಅವಿವ್‌ನಲ್ಲಿ ಕೆಲಸ ಮಾಡುತ್ತಿರುವ ಮಣಿಪಾಲದ ನ್ಯಾನ್ಸಿ ನೊರೊನ್ಹಾ ಎಂಬುವವರು ಮಾತನಾಡಿ, ಸೋಮವಾರ ಮಧ್ಯಾಹ್ನ ಸಾಕಷ್ಟು ಬಾರಿ ಸೈರನ್ ಕೇಳಿ ಬಂದಿತ್ತು. ಕೂಡಲೇ ನಾವು ಬಂಕರ್ ಗಳಿಗೆ ತೆರಳಿದೆವು. ನಮಗೆ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ರಸ್ತೆಗಳು ಬಿಕೋ ಎನ್ನುತ್ತಿವೆ. ಶಾಲೆ,ಕಾಲೇಜು, ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ನೆತನ್ಯಾದಲ್ಲಿ ನೆಲೆಯೂರಿರುವ ಬಂಟ್ವಾಳದ ಸಾಂಡ್ರಾ ಲೋಬೋ ಎಂಬುವವರು ಮಾತನಾಡಿ, ಮನೆಯಲ್ಲಿರುವ ನನ್ನ ತಾಯಿಗೆ ಇಲ್ಲಿನ ಪರಿಸ್ಥಿತಿ ಗೊತ್ತಿಲ್ಲ. ಆಕೆ ಹೃದ್ರೋಗಿಯಾಗಿದ್ದು, ನನ್ನ ಪತಿ ಹಾಗೂ ಕುಟುಂಬದ ಇತರ ಸದಸ್ಯರು ಆತಂಕದಲ್ಲಿದ್ದಾರೆ. ಕೇವಲ ಅರ್ಧ ಗಂಟೆಯ ಹಿಂದೆ, ಇಬ್ಬರು ಹಮಾಸ್ ಉಗ್ರಗಾಮಿಗಳನ್ನು ಸಿಟಿ ಬಸ್ ನಿಲ್ದಾಣದ ಬಳಿ ಸೆರೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಮಾತನಾಡಿ, ಇಸ್ರೇಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಂಗಳೂರಿನ ನಮ್ಮ ಸಮುದಾಯದ ಜನರು ಸುರಕ್ಷಿತವಾಗಿದ್ದಾರೆ, ಆದರೆ, ಆತಂಕದಲ್ಲಿದ್ದಾರೆ. ನಾನು ಜೆರುಸಲೇಮ್ ಮತ್ತು ಇಸ್ರೇಲ್‌ನ ಇತರ ಭಾಗಗಳು ಮತ್ತು ಪ್ಯಾಲೆಸ್ತೀನ್‌ನಲ್ಲಿರುವ ಪಾದ್ರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆಂದು ಹೇಳಿದ್ದಾರೆ.

ಪರಿಸ್ಥಿತಿ ಹದಗೆಡುವ ಸಾಧ್ಯತೆಗಳಿವೆ. ಅವರನ್ನೆಲ್ಲ ಸ್ಥಳಾಂತರಗೊಳಿಸಲು ಸಾಧ್ಯವಿಲ್ಲ. ಭಾರತ ಸರಕಾರ ಇಸ್ರೇಲ್ ಸರಕಾರದೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಜೆರುಸಲೇಂಗೆ ತೆರಳಬೇಕಿದ್ದ ಮಂಗಳೂರಿನ 50 ಯಾತ್ರಾರ್ಥಿಗಳ ತಂಡವನ್ನು ಭಾನುವಾರ ಬೆಂಗಳೂರಿನಿಂದ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com