ಸೌದಿ ಅರೇಬಿಯಾದಲ್ಲಿ ಪುಣೆಯ ಇಬ್ಬರು ಮಹಿಳೆಯರ ಮಾರಾಟ: ಕರ್ನಾಟಕ ಮೂಲದ ವ್ಯಕ್ತಿ ಬಂಧನ
ಮಾನವ ಕಳ್ಳಸಾಗಣೆ ದಂಧೆಯೊಂದನ್ನು ಪುಣೆ ಪೊಲೀಸರು ಬೇಧಿಸಿದ್ದು, ಪ್ರಕರಣ ಸಂಬಂಧ ಕರ್ನಾಟಕ ಮೂಲದ ವ್ಯಕ್ತಿಯೋರ್ವನನ್ನು ಬಂಧನಕ್ಕೊಳಪಡಿಸಿದ್ದಾರೆ.
Published: 22nd September 2023 02:43 PM | Last Updated: 22nd September 2023 07:37 PM | A+A A-

ಸಂಗ್ರಹ ಚಿತ್ರ
ಪುಣೆ: ಮಾನವ ಕಳ್ಳಸಾಗಣೆ ದಂಧೆಯೊಂದನ್ನು ಪುಣೆ ಪೊಲೀಸರು ಬೇಧಿಸಿದ್ದು, ಪ್ರಕರಣ ಸಂಬಂಧ ಕರ್ನಾಟಕ ಮೂಲದ ವ್ಯಕ್ತಿಯೋರ್ವನನ್ನು ಬಂಧನಕ್ಕೊಳಪಡಿಸಿದ್ದಾರೆ.
ಬೆಂಗಳೂರು ಮೂಲದ ಎಂ.ಫೈಯಾಜ್ ಅಲಿಯಾಸ್ ಯಾಹ್ಯಾ (28) ಬಂಧಿತ ಆರೋಪಿಯಾಗಿದ್ದಾನೆ. ಮುಂಬೈನ ಓಶಿವಾರ ಉಪನಗರದಲ್ಲಿರುವ ಮನೆಯಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಈತ ಪುಣೆ ಮೂಲಕ ಇಬ್ಬರು ಮಹಿಳೆಯರನ್ನು ಸೌದಿ ಅರೇಬಿಯಾದಲ್ಲಿ ತಲಾ ರೂ.4 ಲಕ್ಷಕ್ಕೆ ಮಾರಾಟ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಆರೋಪಿಯನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದ್ದು. ಪುಣೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿನ್ನು ಸೆಪ್ಟೆಂಬರ್ 26 ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಮಾರ್ಕೆಟ್‌ಯಾರ್ಡ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಪಿಎಸ್‌ಐ ಯುವರಾಜ್ ಶಿಂಧೆ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾಯಲೆಂದು ಧರ್ಮಸ್ಥಳಕ್ಕೆ ಹೋಗಿದ್ದ ಬಾಲಕಿ: ಮರಳಿ ಬಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ!
ಆರೋಪಿ ಅಬ್ದುಲ್ ಹಮೀದ್ ಶೇಖ್, ಹಕೀಮ್ ಮತ್ತು ಮೂವರು ಮಹಿಳೆಯರಾದ ನಸ್ರೀನ್, ರಹೀಮ್ ಮತ್ತು ಶಮೀಮಾ ಎಂಬ ಐವರು ಸಹಚರರನ್ನು ಹೊಂದಿದ್ದು, ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಆರೋಪಿಗಳು ದಕ್ಷಿಣ ಮುಂಬೈನ ಮಾಹಿಮ್‌ನಲ್ಲಿ ಉದ್ಯೋಗಿಗಳ A. A. ಎಂಟರ್‌ಪ್ರೈಸಸ್ ಎಂಬ ನೇಮಕಾತಿ ಸಂಸ್ಥೆಯನ್ನು ಹೊಂದಿದ್ದು, ಇವರು ಬಡ ಹೆಣ್ಣು ಮಕ್ಕಳಿಗೆ ದೊಡ್ಡ ವೇತನ ಸಿಗುವ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿ, ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಸೌದಿ ಅರೇಬಿಯಾದ ದೊಡ್ಡ ಶ್ರೀಮಂತ ಕುಟುಂಬಗಳಿಗೆ ತಿಂಗಳಿಗೆ ಕನಿಷ್ಟ ರೂ.35 ಸಾವಿರ ವೇತನ ಕೊಡಿಸುವುದಾಗಿ ಆಮಿಷ ವೊಡ್ಡುತ್ತಿದ್ದರು.
ಈ ಆಮಿಷಕ್ಕೆ ಪುಣೆಯ ಇಬ್ಬರು ಮಹಿಳೆಯರು ಬಿದ್ದಿದ್ದಾರೆ. ಪ್ರವಾಸಿ ವೀಸಾದಲ್ಲಿ ಇಬ್ಬರನ್ನು ಸೌದಿ ಅರೇಬಿಯಾಗೆ ಕಳುಹಿಸಿದ್ದಾರೆ. ಬಳಿಕ ಕಡಿಮೆ ವೇತನದ ಉದ್ಯೋಗ ನೀಡಿ, ಚಿತ್ರಹಿಂಸೆ ನೀಡಲಾಗಿದೆ. ಕಿರುಕುಳ ತಾಳಲಾರದೆ ಮಹಿಳೆಯರು ದೂರು ನೀಡಲು ಸ್ಥಳೀಯ (ಸೌದಿ ಅರೇಬಿಯಾ) ಏಜೆಂಟರನ್ನು ಸಂಪರ್ಕಿಸಿದ್ದಾರೆ. ಆದರೆ, ಅಲ್ಲಿ ಮಹಿಳೆಯರು ತಲಾ ರೂ.4 ಲಕ್ಷ ನೀಡುವಂತೆ ತಿಳಿಸಿದ್ದಾರೆ. ಬಳಿಕ ಆರೋಪಿ ಫೈಯಾಜ್ ತಮ್ಮನ್ನು ತಲಾ ರೂ.4 ಲಕ್ಷಕ್ಕೆ ಮಾರಾಟ ಮಾಡಿರುವ ವಿಚಾರವನ್ನು ತಿಳಿದುಕೊಂಡಿದ್ದಾರೆ.
ಇದನ್ನೂ ಓದಿ: ಪೊರಕೆಯಿಂದ ಹೊಡೆದು ಮಹಿಳೆಯಿಂದ ಜಾತಿ ನಿಂದನೆ; ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಸತತ ಯತ್ನಗಳ ಬಳಿಕ ಮಹಿಳೆಯರು ಪುಣೆಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಂತೆ ಸೋಮವಾರ ಮಾರ್ಕೆಟ್‌ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ಫೈಯಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಆರೋಪಿಗಳ ಬಲೆಗೆ ಇನ್ನೆಷ್ಟು ಮಹಿಳೆಯರು ಸಿಕ್ಕಿಬಿದ್ದಿದ್ದಾರೆಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಫೈಯಾಜ್ ವಿರುದ್ಧ ಮಾನವ ಕಳ್ಳಸಾಗಣೆ, ಮಾರಾಟ, ಸುಲಿಗೆ, ವಂಚನೆ ಇತ್ಯಾದಿಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.