ಬೆಂಗಳೂರಿನಲ್ಲಿ ಆತಂಕ ಹುಟ್ಟಿಸಿದ ಕಾಲರಾ: ಎಚ್ಚೆತ್ತ ಬಿಬಿಎಂಪಿ, ಮಾರ್ಗಸೂಚಿ ಬಿಡುಗಡೆ

ನಗರದಲ್ಲಿ ಬರ, ನೀರಿನ ಸಮಸ್ಯೆ ನಡುವಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕಾಲರಾ ಹೆಚ್ಚಾಗುತ್ತಿದ್ದು, ಇದು ಆತಂಕವನ್ನು ಹೆಚ್ಚಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಬರ, ನೀರಿನ ಸಮಸ್ಯೆ ನಡುವಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕಾಲರಾ ಹೆಚ್ಚಾಗುತ್ತಿದ್ದು, ಇದು ಆತಂಕವನ್ನು ಹೆಚ್ಚಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾರ್ಚ್ 30 ಮಲ್ಲೇಶ್ವರ ವಾಸಿ 27 ವರ್ಷ ವಯಸ್ಸಿನ ಮಹಿಳೆಯೊಬ್ಬರು ಅತಿಸಾರಭೇದಿ ಮತ್ತು ವಾಂತಿ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ವೈದ್ಯರು, ಕಾಲರಾ ಲಕ್ಷಣ ಇರುವುದಾಗಿ ಹೇಳಿದ್ದಾರೆ.

ಕೂಡಲೇ ವೈದ್ಯರು ಈ ಕುರಿತ ಪ್ರಾಥಮಿಕ ಮಾಹಿತಿಯನ್ನು ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.

ಆರಂಭಿಕ ಹಂತದ ಪರೀಕ್ಷೆಗಳಲ್ಲಿ ಕಾಲರಾ ಇರುವ ಬಗ್ಗೆ ಪಾಸಿಟೀವ್ ವರದಿ ಬಂದಿದೆ. ನಂತರ ಪ್ರಯೋಗಾಲಯದ ಪರೀಕ್ಷೆಯಲ್ಲಿ (ಮಲ ಮಾದರಿ ಪರೀಕ್ಷೆ) ನಗೆಟಿವ್ ವರದಿ ಬಂದಿದೆ.

ಸಂಗ್ರಹ ಚಿತ್ರ
ಕಲುಷಿತ ನೀರು; ಸ್ವಾಸ್ಥ್ಯಕ್ಕೆ ಎರವಾಗುತ್ತಿರುವ ಬ್ಯಾಕ್ಟೀರಿಯಾ, ನಗರದಲ್ಲಿ ಹೆಚ್ಚುತ್ತಿದೆ ಕಾಲರಾ!

ಮಹಿಳೆಯು ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಪ್ರಯಾಣ, ಜನ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಹೊರಗಿನ ಆಹಾರ ಸೇವನೆಯನ್ನು ಮಾಡಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಬೆನ್ನಲ್ಲೆ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಮಾರ್ಗಸೂಚಿಯನ್ನೂ ಕೂಡ ಬಿಡುಗಡೆ ಮಾಡಿದೆ.

ಬಿಬಿಎಂಪಿ ಆರೋಗ್ಯ ತಂಡವು ಮಹಿಳೆ ವಾಸವಿರುವ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದೆ. ಸಾರ್ವಜನಿಕರಿಗೆ ರೋಗ ಹರಡುವ ವಿಧಾನಗಳು, ನೈರ್ಮಲ್ಯದ ಪ್ರಾಮುಖ್ಯತೆ, ಶುದ್ಧ ನೀರಿನ ಬಳಕೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯ ಶಿಕ್ಷಣವನ್ನು ನೀಡುತ್ತಿದ್ದು ಸದರಿ 165 ಮನೆಗಳಲ್ಲಿ ಯಾವುದೇ ರೀತಿಯ ಕಾಲರಾ ರೋಗದ ಲಕ್ಷಣಗಳು ವರದಿ ಆಗಿಲ್ಲ. ಆತಂಕ ಬೇಡ ಎಂದು ಹೇಳಿದೆ.

ಈ ನಡುವೆ 10 ನೀರಿನ ಮಾದರಿಗಳನ್ನು ಸೋಂಕು ಶಂಕಿತ ಪ್ರದೇಶದಿಂದ ಸಂಗ್ರಹಿಸಿ ಪರೀಕ್ಷೆಗಾಗಿ Public Health Institute ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ತಿಳಿದುಬರಲಿದೆ.

ಸಂಗ್ರಹ ಚಿತ್ರ
ಕೊರೊನಾ ವೈರಸ್ ಭೀತಿಯ ನಡುವೆ ಬೆಂಗಳೂರಿನಲ್ಲಿ ಕಾಲರಾ ರೀತಿಯ ರೋಗ ಲಕ್ಷಣಗಳು ಪತ್ತೆ!

ಬಿಬಿಎಂಪಿ ಕೈಗೊಂಡ ಕ್ರಮಗಳು ಇಂತಿವೆ...

  • ರೋಗ ಹರುಡುವಿಕೆ ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು, ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡ ರಚನೆ

  • ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನ ವಿತರಿಸಲು ಸಲಹೆ ನೀಡಲಾಗಿದೆ.

  • ಪಾಲಿಕೆ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಲರಾ ತಪಾಸಣೆಗೆ ಸೂಚನೆ.

  • ಶಂಕಿತ ಪ್ರಕರಣಗಳು ವರದಿಯಾದಲ್ಲಿ ಸರ್ಕಾರ ನಿಗದಿಪಡಿಸಿರುವ ಐ.ಹೆಚ್.ಐ.ಪಿ (IHIP) ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚನೆ.

  • ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನ ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ PHI ಲ್ಯಾಬ್‌ಗೆ ಪ್ರತಿನಿತ್ಯ ಕಳುಹಿಸಲು ಸೂಚನೆ.

  • ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಓಆರ್​ಎಸ್​ ಕಾರ್ನರ್‌ಗಳನ್ನ ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು.

  • ನೀರಿನಿಂದ ಹರಡುವ ರೋಗಗಳನ್ನ ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com