ಮಂಡ್ಯ ನಗರಸಭೆ, JDSನ ನಾಗೇಶ್ ಅಧ್ಯಕ್ಷ, ಕೈ'ಗೆ ಹಿನ್ನಡೆ; ಯತ್ನಾಳ್ ಪ್ರತಿಭಟನೆ; ದರ್ಶನ್'ಗೆ ರಾಜಾತಿಥ್ಯ, ಮತ್ತೆ 3 ಪೊಲೀಸರ ಅಮಾನತು; ನಾಯಿ ದಾಳಿಗೆ ಮಹಿಳೆ ಬಲಿ! ಇವು ಇಂದಿನ ಪ್ರಮುಖ ಸುದ್ದಿಗಳು 28-08-24

ಮಂಡ್ಯ ನಗರಸಭೆ, JDSನ ನಾಗೇಶ್ ಅಧ್ಯಕ್ಷ, ಕೈ'ಗೆ ಹಿನ್ನಡೆ; ಯತ್ನಾಳ್ ಪ್ರತಿಭಟನೆ; ದರ್ಶನ್'ಗೆ ರಾಜಾತಿಥ್ಯ, ಮತ್ತೆ 3 ಪೊಲೀಸರ ಅಮಾನತು; ನಾಯಿ ದಾಳಿಗೆ ಮಹಿಳೆ ಬಲಿ! ಇವು ಇಂದಿನ ಪ್ರಮುಖ ಸುದ್ದಿಗಳು 28-08-24

1. ಸಿದ್ದಸಿರಿ ಸಕ್ಕರೆ ಕಾರ್ಖಾನೆ ಪುನರಾರಂಭ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ

ಕಲಬುರ್ಗಿ ಜಿಲ್ಲೆಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ಮರು ಆರಂಭಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಗಳೂರಿನಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಧರಣಿ ನಡೆಸಿದ್ದಾರೆ. ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕೋರ್ಟ್ ಆದೇಶ ನೀಡಿದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗೆ ಕ್ರಮ ವಹಿಸದ ನಿರ್ಧಾರವನ್ನು ಬಸನಗೌಡ ಪಾಟೀಲ್ ಖಂಡಿಸಿದ್ದಾರೆ. ಸಕ್ಕರೆ ಕಾರ್ಖಾನೆ ಲೈಸನ್ಸ್ ನವೀಕರಣ ಆಗಿಲ್ಲ ಮತ್ತು ಎಥೆನಾಲ್ ಉತ್ಪಾದನೆ ವಿಚಾರದಲ್ಲಿ‌ ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಮುಚ್ಚುವಂತೆ ನೋಟಿಸ್ ನೀಡಿ, ಬಂದ್ ಮಾಡಿಸಿತ್ತು. ಮಂಡಳಿಯ ನಿರ್ಧಾರದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು ಯತ್ನಾಳ್ ಪರ ತೀರ್ಪು ಬಂದಿತ್ತು. ಧರಣಿಗೆ ವಿಪಕ್ಷ ನಾಯಕ ಆರ್ ಅಶೋಕ್ ಬೆಂಬಲ ಸೂಚಿಸಿದ್ದು ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದರು.

2. ಮಂಡ್ಯ ನಗರಸಭಾ ಚುನಾವಣೆ ಕಾಂಗ್ರೆಸ್‌ಗೆ ಹಿನ್ನಡೆ. ಅಧ್ಯಕ್ಷರಾಗಿ ಜೆಡಿಎಸ್ ನಾಗೇಶ್ ಆಯ್ಕೆ

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಕಾರಣವಾಗಿದ್ದ ಮಂಡ್ಯ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿದೆ. ಮಂಡ್ಯ ನಗರಸಭೆ ಚುನಾವಣೆ ಚಲುವರಾಯಸ್ವಾಮಿ ಹಾಗೂ ಎಚ್ ಡಿ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಆದರೆ ಮಂಡ್ಯದಲ್ಲಿ ಜೆಡಿಎಸ್ ಮೈಲುಗೈ ಸಾಧಿಸಿದ್ದು ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ ನ ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಆಪರೇಷನ್ ಹಸ್ತ ಮಾಡಿ ಜೆಡಿಎಸ್ ನ ಇಬ್ಬರನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್ಸಿನ ಒಬ್ಬ ಪ್ರಭಾವಿ ನಾಯಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಮಂಡ್ಯ ನಗರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

3. ದರ್ಶನ್'ಗೆ ರಾಜಾತಿಥ್ಯ, ಮತ್ತೆ 3 ಪೊಲೀಸರ ಅಮಾನತು

ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕೇಂದ್ರ ಕಾರಾಗೃಹದ ವೀಕ್ಷಕ ಕೆ.ಎಸ್.ಸುದರ್ಶನ್, ಜೈಲರ್ ಪರಮೇಶ್ ನಾಯ್ಕ್ ಲಮಾಣಿ, ಸಹಾಯಕ ಜೈಲರ್ ಕೆ.ಬಿ.ರಾಯಮನೆ ಅವರನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 24ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ತಪಾಸಣೆ ನಡೆಸಿದ್ದರು. ದಾಳಿ ವೇಳೆ ಯಾವುದೇ ನಿಷೇಧ ವಸ್ತುಗಳು ಸಿಕ್ಕಿರಲಿಲ್ಲ. ಆದರೆ, ಜೈಲಿನಲ್ಲಿ ದರ್ಶನ್ ಗೆ ವಿಶೇಷ ಆತಿಥ್ಯ ನೀಡುತ್ತಿರುವ ಫೋಟೋ ಆಗಸ್ಟ್ 25ರಂದು ವೈರಲ್ ಆದ ಬೆನ್ನಲ್ಲೇ, ಆ.23 ರಾತ್ರಿಯ ಕಾರಾಗೃಹದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಜೈಲಿನ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಆರೋಪಿಗಳ ಕೊಠಡಿಗಳಿಂದ ಕೆಲ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

4. ಪವಿತ್ರಾಗೌಡ ಜಾಮೀನು ಅರ್ಜಿ ಆದೇಶ ಆಗಸ್ಟ್ 31ಕ್ಕೆ ಮುಂದೂಡಿಕೆ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಗೆ ವಿಶೇಷ ಆತಿಥ್ಯ ಸಿಗುತ್ತಿರುವ ವಿಷಯ ಕೋಲಾಹಲ ಸೃಷ್ಟಿಸಿದೆ. ಅಲ್ಲದೆ ನಟನನ್ನು ಬಳ್ಳಾರಿಯ ಜೈಲಿಗೆ ಸ್ಥಳಾಂತರದ ನಡುವೆ ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದು, ಆತ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಮತ್ತೆ 13 ದಿನಗಳ ಕಾಲ ಅಂದರೆ ಸೆಪ್ಟಂಬರ್ 9ರವರೆಗೆ ವಿಸ್ತರಿಸಿದೆ. ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಜಾಮೀನಿಗಾಗಿ ಎ1 ಆರೋಪಿ ಪವಿತ್ರಾಗೌಡ, ಸ್ಟೋನಿ ಬ್ರೂಕ್ ಮಾಲೀಕ ಎ10 ಆರೋಪಿ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಸಹ ಅರ್ಜಿ ಸಲ್ಲಿಸಿದ್ದು ಎಲ್ಲರ ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಲಾಗಿದೆ.

5. ಬೆಂಗಳೂರಿನಲ್ಲಿ ನಾಯಿ ದಾಳಿಗೆ ಮಹಿಳೆ ಬಲಿ

ಬೆಂಗಳೂರಿನ ಜಾಲಹಳ್ಳಿ ಏರ್ಫೋಸ್ ಕ್ಯಾಂಪಸ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಬೀದಿ ನಾಯಿಗಳ ದಾಳಿಗೆ ಸಿಲುಕಿ 76 ವರ್ಷದ ವೃದ್ಧ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ರಾಜ್ ದುಲಾರಿ ಸಿನ್ಹಾ ಬೀದಿ ನಾಯಿಗಳ ದಾಳಿಗೆ ಬಲಿಯಾದ ಮಹಿಳೆ. ಜಾಲಹಳ್ಳಿಯ ಏರ್ ಫೋರ್ಸ್ ಈಸ್ಟ್ 7ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರು ಆಟದ ಮೈದಾನದಲ್ಲಿ ಇಂದು ಬೆಳಿಗ್ಗೆ 6.30ರ ಸುಮಾರಿಗೆ ರಾಜ್ ದುಲಾರಿ ಅವರು ವಾಕಿಂಗ್ ಮಾಡುತ್ತಿದ್ದಾಗ ಸುಮಾರು 10-12 ನಾಯಿಗಳು ಹಠಾತ್ ದಾಳಿ ನಡೆಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com