ಬೆಂಗಳೂರು: 300 ಮರಗಳನ್ನು ಕಡಿದ ರಿಯಾಲ್ಟಿ ಸಂಸ್ಥೆಗೆ 40 ಲಕ್ಷ ರೂ. ದಂಡ, ಮೂವರ ಬಂಧನ

ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಅಕ್ರಮವಾಗಿ 303 ಮರಗಳನ್ನು ಕಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿ 40 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ಕೋಶವು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಬಿಲ್ಡರ್ ಗಳಿಗೆ ಬಲವಾದ ಸಂದೇಶ ರವಾನಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಅಕ್ರಮವಾಗಿ 303 ಮರಗಳನ್ನು ಕಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿ 40 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ಕೋಶವು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಬಿಲ್ಡರ್ ಗಳಿಗೆ ಬಲವಾದ ಸಂದೇಶ ರವಾನಿಸಿದೆ. 

17.12 ಎಕರೆ ಭೂಮಿಯನ್ನು ಖರೀದಿಸಿದ ರಿಯಲ್ ಎಸ್ಟೇಟ್ ಕಂಪನಿಯಾದ ಕಾಸಾ ಗ್ರ್ಯಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್ ಕಟ್ಟಡಗಳಿಗೆ ಜಾಗವನ್ನು ನೀಡಲು 303 ಮರಗಳನ್ನು ಕಡಿಯಲಾಗಿತ್ತು. ಕೆಲವು ಜಾತಿಯ ಮರಗಳಿಗೆ ಅನುಮತಿಯಿಂದ ವಿನಾಯಿತಿ ನೀಡಲಾಗಿದ್ದರೂ, ನಿಯಮಗಳನ್ನು ಪಾಲಿಸದ ಕಂಪನಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪಾಲಿಕೆ ನಿರ್ಧರಿಸಿದೆ. ರಿಯಲ್ ಎಸ್ಟೇಟ್ ಕಂಪನಿಯ ಸೆಂಥಿಲ್ ಮತ್ತು ಭಾಸ್ಕರ್ ಮತ್ತು ಮರ ಕಡಿಯುವ ಗುತ್ತಿಗೆದಾರ ಪುಟ್ಟಸ್ವಾಮಿ ಬಂಧಿತರಾಗಿದ್ದರು, ನಂತರ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು. 

ಬೆಂಗಳೂರು ದಕ್ಷಿಣ ತಾಲೂಕಿನ ಹೆಮ್ಮಿಗೆಪುರ ವಾರ್ಡ್‌ನ ಮಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 18ರಲ್ಲಿ ದೊಡ್ಡ ಮರಗಳನ್ನು ಕಡಿದು ಲಾರಿಗಳಲ್ಲಿ ತುಂಬಿಸಲಾಗುತ್ತಿದೆ ಎಂದು ಕಚೇರಿಗೆ ದೂರು ಬಂದಿತ್ತು ಎಂದು ಬಿಬಿಎಂಪಿ ಡಿಸಿಎಫ್, ಬಿಎಲ್‌ಜಿ ಸ್ವಾಮಿ ಹೇಳಿದ್ದಾರೆ. 

ಮರ ಕಡಿಯುವಿಕೆಯಲ್ಲಿ ಭಾಗಿಯಾಗಿರುವ ಕಂಪನಿಯ ಅಧಿಕಾರಿಗಳು ತೃಪ್ತಿದಾಯಕ ಉತ್ತರವನ್ನು ನೀಡಲು ವಿಫಲರಾಗಿದ್ದಾರೆ ಮತ್ತು ಪೂರ್ವಾನುಮತಿ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡಲಿಲ್ಲ. ಮರದ ದಿಮ್ಮಿಗಳನ್ನು ಟ್ರಕ್‌ಗಳಿಗೆ ತುಂಬುತ್ತಿದ್ದ ಅವರ ಮತ್ತು ಮಾರಾಟಗಾರರ ವಿರುದ್ಧ ಮರ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಿಬಿಎಂಪಿ ಅರಣ್ಯ ಕೋಶವು 40 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಬಿಬಿಎಂಪಿ ಮತ್ತು ಅರಣ್ಯ ಕಾಯ್ದೆ ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ 1:20 ಮರದ ಸಸಿಗಳನ್ನು ನೆಡಲು ಕಂಪನಿಗೆ ಆದೇಶಿಸಿದೆ ಎಂದು ಸ್ವಾಮಿ ಹೇಳಿದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ವೃಕ್ಷ ಸಮಿತಿ ರಚಿಸಲಾಗಿದೆ. ಯೋಜನೆಗೆ 50ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಬಿಬಿಎಂಪಿ ವೃಕ್ಷ ಸಮಿತಿಯ ಗಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಮರ ಕಡಿಯುವ ವ್ಯಕ್ತಿಗಳನ್ನು ಮರ ಸಂರಕ್ಷಣಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com