ಪಿಜಿ ಕೇಂದ್ರಗಳಿಗೆ ಮಾರ್ಗಸೂಚಿ ಹೊರಡಿಸಿದ ಸರ್ಕಾರ: ಸುರಕ್ಷತಾ ಕ್ರಮಗಳ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ

ನಗರದಲ್ಲಿ ಪೇಯಿಂಗ್ ಗೆಸ್ಟ್ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದ್ದು, ಹಲವು ಕೇಂದ್ರಗಳು ಸುರಕ್ಷತಾ ಕ್ರಮಗಳ ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಪಿಜಿ ಕೇಂದ್ರಗಳಿಗೆ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಪೇಯಿಂಗ್ ಗೆಸ್ಟ್ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದ್ದು, ಹಲವು ಕೇಂದ್ರಗಳು ಸುರಕ್ಷತಾ ಕ್ರಮಗಳ ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಪಿಜಿ ಕೇಂದ್ರಗಳಿಗೆ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದಾರೆ.

ಈ ಬಗ್ಗೆ ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಹೆಚ್ಚುರಿ ಪೊಲೀಸ್ ಆಯುಕ್ತ (ಪೂರ್ವ) ಪೋಸ್ಟ್ ಮಾಡಿದ್ದು, ಪಿಜಿ ಮಾಲೀಕರಿಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಾಲಂ 34 (ಡಿ) ಮತ್ತು 70 ಅನ್ವಯ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ತಿಳಿಸಿದ್ದಾರೆ.

ಮಾರ್ಗಸೂಚಿ ವಿವರ ಇಂತಿದೆ...

  • ಪಿ.ಜಿ ಮಾಲೀಕರು ಅಗತ್ಯವಿರುವ ಪರವಾನಿಗೆಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ ಟ್ರೇಡ್ ಲೈಸನ್ಸ್ ಪಡೆಯಬೇಕು.
  • ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆದು, ರಕ್ತ ಸಂಬಂಧಿಕರ ವಿವರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ತಂತ್ರಜ್ಞಾನದ ಮೂಲಕ (ಗಣಕೀಕರಣ) ದಾಖಲಿಸಬೇಕು. ಭೇಟಿ ನೀಡಲು ಬರುವವರ (ಸಂಬಂಧಿಕರು /ಸಾರ್ವಜನಿಕರು ಸೇರಿದಂತೆ) ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು.
  • ಕರ್ನಾಟಕ ಸಾರ್ವಜನಿಕರ ಸುರಕ್ಷತೆ ಅಧಿನಿಯಮ-2017 ರ ಅನ್ವಯ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸುವುದು ಹಾಗೂ ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು.
  • ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆಯಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡತಕ್ಕದಲ್ಲ ಎಂದು ತಿಳಿಸಲಾಗಿದೆ.
  • ಕರ್ತವ್ಯಕ್ಕೆ ನೇಮಿಸಿಕೊಳ್ಳುವ ಎಲ್ಲಾ ವ್ಯಕ್ತಿಗಳ (ಅಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ಹಾಗೂ ಇನ್ನಿತರೇ ವ್ಯಕ್ತಿಗಳ) ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿದ ನಂತರ ಕರ್ತವ್ಯಕ್ಕೆ ನೇಮಿಸಿಕೊಳ್ಳಬೇಕು. ಇತರೆ ವಿಳಾಸದ ದೃಢೀಕರಣ ಸೇರಿದಂತೆ ರಕ್ತ ಸಂಬಂಧಿಕರ ಮಾಹಿತಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಪಡೆದು ನಿರ್ವಹಿಸಬೇಕು.
  • ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸ್ಪಂದನೆಯ-112, ವೈದ್ಯಕೀಯ ಸೇವೆಯ-103, ಮತ್ತು ಸೈಬರ್ ಅಪರಾಧಕ್ಕೆ ಸಂಬಂಧಪಟ್ಟ - 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಗೋಚರವಾಗುವಂತೆ ಪ್ರದರ್ಶಿಸುವುದು ಹಾಗೂ ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು ಎಂದು ಸುರಕ್ಷತಾ ಕ್ರಮಗಳ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
  • ವಿದೇಶಿ ಪ್ರಜೆಗಳು ಪಿ.ಜಿಯಲ್ಲಿ ನೆಲೆಸಿದ್ದರೆ ಮಾಹಿತಿಯನ್ನು ದಿ ರಿಜಿಸ್ಟ್ರೇಷನ್ ಆಫ್ ಫಾರೀನ್ ರೂಲ್ಸ್​​ 1939 ಅನ್ವಯ ಫಾರಂ ’ಸಿ’’ ಅನ್ವಯ ಸ್ಥಳೀಯ ಪೊಲೀಸ್ ಠಾಣೆಗೆ ನೇರವಾಗಿ ಅಥವಾ ತಂತ್ರಜ್ಞಾನದ ಮೂಲಕ ನೀಡಬೇಕು.
  • ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತುಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡತಕ್ಕದ್ದಲ್ಲ.
  • ಸರ್ವೋಚ್ಛ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ದಕಗಳನ್ನು ಉಪಯೋಗಿಸತಕ್ಕದಲ್ಲ.
  • ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದ್ದಲ್ಲಿ, ಸಂಬಂಧಪಟ್ಟ ಪಿ.ಜಿ. ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com