ಬೆಂಗಳೂರು: ಡೆಂಗ್ಯೂ ನಿಯಂತ್ರಣಕ್ಕೆ 3,000 ತಂಡಗಳ ನಿಯೋಜನೆ!

ನಗರದಲ್ಲಿ 2024 ಜನವರಿಯಿಂದ ಇದುವರೆಗೆ 3,815 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಜುಲೈ 1ರಿಂದ 6ನೇ ತಾರೀಖಿನವರೆಗೆ 776 ಪ್ರಕರಣಗಳು ದೃಢಪಟ್ಟಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಿರುವ ಬಿಬಿಎಂಪಿ, ಕಿರಿಯ ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಎಎನ್​ಎಂಗಳು, ಲಿಂಕ್ ವರ್ಕರ್ಸ್​ ಹಾಗೂ ಸ್ವಯಂ ಸೇವಕರನ್ನೊಳಗೊಂಡಂತೆ 3,000ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಿದೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಡೆಂಗ್ಯೂ ಹರಡುವುದನ್ನು ನಿಯಂತ್ರಿಸಲು ಪಾಲಿಕೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆಶಾ ಕಾರ್ಯಕರ್ತೆಯರು, ಎಎನ್​ಎಂಗಳು, ಲಿಂಕ್ ವರ್ಕರ್ಸ್​ ಹಾಗೂ ಸ್ವಯಂ ಸೇವಕರನ್ನೊಳಗೊಂಡಂತೆ 3,000ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದೆ. ಎಲ್ಲಾ 25 ಲಕ್ಷ ಮನೆಗಳಿಗೂ ಭೇಟಿ ನೀಡಿ ಸಮೀಕ್ಷೆ ನಡೆಸುವ ಜೊತೆಗೆ ಡೆಂಗ್ಯೂ ನಿಯಂತ್ರಣ ಕುರಿತ ಬಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ 2024 ಜನವರಿಯಿಂದ ಇದುವರೆಗೆ 3,815 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಜುಲೈ 1ರಿಂದ 6ನೇ ತಾರೀಖಿನವರೆಗೆ 776 ಪ್ರಕರಣಗಳು ದೃಢಪಟ್ಟಿವೆ. ಪ್ರತಿನಿತ್ಯ ಸರಾಸರಿ 130ರಿಂದ 140 ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ ಹಾಗೂ ಫಾಗಿಂಗ್ ಹೆಚ್ಚಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು,

ಸಂಗ್ರಹ ಚಿತ್ರ
ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ: 'ವೈದ್ಯಕೀಯ ತುರ್ತು ಪರಿಸ್ಥಿತಿ' ಘೋಷಿಸುವ ಸ್ಥಿತಿ ಬಂದಿಲ್ಲ ಎಂದ ಸರ್ಕಾರ

ಪಾಲಿಕೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಾಗರೀಕರು ತಮ್ಮ-ತಮ್ಮ ಮನೆಗಳಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ತಪ್ಪದೆ ಅನುಸರಿಸಿದಲ್ಲಿ ಮಾತ್ರ ಡೆಂಗ್ಯೂ ನಿಯಂತ್ರಿಸಲು ಸಾಧ್ಯ. ಡೆಂಗ್ಯೂ ನಿಯಂತ್ರಣದಲ್ಲಿ ನಾಗರೀಕರ ಸಹಕಾರ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಮಳೆ ನಿಂತು ನಿಂತು ಬರುತ್ತಿರುವ ಪರಿಣಾಮ ನೀರು ನಿಂತಲ್ಲೇ ನಿಂತು ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಒಮ್ಮೆಲೆ ಜೋರಾಗಿ ಮಳೆ ಬಂದರೆ ಸೊಳ್ಳೆಗಳ ಉತ್ಪತ್ತಿ ತಾಣಗಳು ನಾಶವಾಗುತ್ತದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಉದ್ದೇಶದಿಂದ ಔಷಧಿ ಸಿಂಪಡಣೆ ಮಾಡುವ ಹಾಗೂ ಫಾಗಿಂಗ್ ಮಾಡುವ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದ್ದು, ಹೊಸದಾಗಿ ಸೃಷ್ಟಿಯಾಗುವ ರಸ್ತೆ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕಾರ್ಯ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ನಿಟ್ಟಿನಲ್ಲಿ ವಿನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ತಂತ್ರಾಂಶದಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ನಾಗರೀಕರಿಗೂ ರಸ್ತೆ ಗುಂಡಿಗಳು ಬಿದ್ದಿರುವ ಬಗ್ಗೆ ಅಪ್ಲೋಡ್ ಮಾಡಲು ಅವಕಾಶ ನೀಡಲಾಗುವುದು. ಇದರಿಂದ ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com