ರಾಜ್ಯಕ್ಕೆ ಮುಂಗಾರು ಪ್ರವೇಶ: ಮೊದಲ ಮಳೆಗೆ ರಾಜ್ಯದಲ್ಲಿ ಅವಾಂತರ ಸೃಷ್ಟಿ, ಹಲವೆಡೆ ಮನೆಗಳಿಗೆ ನುಗ್ಗಿದ ನೀರು!

ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಶುರುವಾಗಿದ್ದು, ಶನಿವಾರ ಸುರಿದ ಭಾರೀ ಮಳೆಗೆ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ಬನಶಂಕರಿಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ವಾಹನ ಸವಾರರು ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಟ್ಟರು.
ಬನಶಂಕರಿಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ವಾಹನ ಸವಾರರು ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಟ್ಟರು.
Updated on: 

ಬೆಂಗಳೂರು: ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಶುರುವಾಗಿದ್ದು, ಶನಿವಾರ ಸುರಿದ ಭಾರೀ ಮಳೆಗೆ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ನಗರದಲ್ಲಿ ರಾತ್ರಿ 8.30ರವರೆಗೆ 13.4 ಮಿ.ಮೀ ಮಳೆ ದಾಖಲಾಗಿದೆ. ಭಾರೀ ಮಳೆಯಿಂದಾಗಿ ಯಲಚೇನಹಳ್ಳಿ ಮತ್ತು ರಾಮಕೃಷ್ಣನಗರದಲ್ಲಿ ಅವಾಂತರ ಸೃಷ್ಟಿಯಾಗಿತ್ತು. ಚರಂಡಿಯ ನೀರು ಅನೇಕ ಪ್ರದೇಶಗಳಿಗೆ ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

ಇದರಿಂದ ಬೇಸತ್ತ ಸ್ಥಳೀಯರು ಯಲಚೇನಹಳ್ಳಿ ಮತ್ತು ರಾಮಕೃಷ್ಣನಗರದಲ್ಲಿ ಉಂಟಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪಟ್ಟು ಬಿಡದ ಕಾರಣ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಅಜಿತ್ ಎಂ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಬನಶಂಕರಿಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ವಾಹನ ಸವಾರರು ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಟ್ಟರು.
Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆ, ರಸ್ತೆಗಳು ಜಲಾವೃತ್ತ, ಮೇಲ್ಸೇತುವೆ ಕೆಳಗೆ ಆಶ್ರಯ ಪಡೆದ ಸವಾರರು!

ಕಾರ್ಯಕರ್ತ ಗುಲಾಬ್ ಪಾಷಾ ಮಾತನಾಡಿ, ಕಳೆದ 12 ವರ್ಷಗಳಿಂದ ಎರಡು ಬಡಾವಣೆಗಳು ಈ ಸಮಸ್ಯೆ ಎದುರಿಸುತ್ತಿವೆ. ಬಿಬಿಎಂಪಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳ ನಡುವಿನ ಸಮನ್ವಯ ಮತ್ತು ಬದ್ಧತೆಯ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಮಧ್ಯಾಹ್ನ ಸುರಿದ ಸಾಧಾರಣ ಮಳೆಗೆ ಯಲಚೇನಹಳ್ಳಿ ಮತ್ತು ರಾಮಕೃಷ್ಣನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದವು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಹೀಗಾಗಿ ಜನರು ಮನೆಯಿಂದ ಹೊರಬಂದು ಯಲಚೇನಹಳ್ಳಿಯಲ್ಲಿ ರಸ್ತೆ ತಡೆ ನಡೆಸಿದರು. ನಂತರ ಜಂಟಿ ಆಯುಕ್ತರು ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಸಂಜೆ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡಸಿದರು. ತ್ವರಿತ ಮತ್ತು ಶಾಶ್ವತ ಪರಿಹಾರವನ್ನು ನಿರೀಕ್ಷಿಸುತ್ತೇವೆ ಎಂದು ತಿಳಿಸಿದರು.

ಇದು ದೊಡ್ಡ ಸಮಸ್ಯೆಯಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯಲಚೇನಹಳ್ಳಿ ಮತ್ತು ರಾಮಕೃಷ್ಣನಗರದಲ್ಲಿ ಕೆಲವು ಅಪೂರ್ಣ ಚರಂಡಿ ಕಾಮಗಾರಿಯಿಂದಾಗಿ ಈ ರೀತಿಯಾಗಿದೆ. ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಮಳೆಯಿಂದಾಗಿ ನಗರದ ಇತರ ಪ್ರದೇಶಗಳಲ್ಲಿ ಮರಗಳು ಉರುಳಿವೆ. ಇದರಿಂದ ಸಂಚಾರಕ್ಕೆ ಅಡೆತಡೆಯುಂಟಾಗಿತ್ತು. ನಗರದ ಹಲವೆಡೆ ಕೆಲ ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com