ದರ ಪರಿಷ್ಕರಣೆಯಿಂದ ಜವಾಬ್ದಾರಿಯುತ ನೀರು ಬಳಕೆ ಸಾಧ್ಯವೇ? ತಜ್ಞರ ಅಭಿಪ್ರಾಯವೇನು?

ಬೇಸಿಗೆ ಆರಂಭದಲ್ಲೇ ಕರ್ನಾಟಕ ರಾಜ್ಯಾದ್ಯಂತ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಂತೂ ಹಾಹಾಕಾರವೇ ಶುರುವಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗುವುದು ಸಹಜ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೇಸಿಗೆ ಆರಂಭದಲ್ಲೇ ಕರ್ನಾಟಕ ರಾಜ್ಯಾದ್ಯಂತ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಂತೂ ಹಾಹಾಕಾರವೇ ಶುರುವಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗುವುದು ಸಹಜ. ಆದರೆ, ಈ ಬಾರಿ ನೀರಿನ ಅಭಾವ ವಿಪರೀತವಾಗಿದೆ. ಕಳೆದ ವರ್ಷ ಮಳೆ ಕೈಕೊಟ್ಟಿದ್ದೇ ಇದಕ್ಕೆ ಮೊದಲ ಕಾರಣ. ಜೊತೆಗೆ ಜಲ ಸಂರಕ್ಷಣೆಯ ಮಹತ್ವ ಸಾಕಷ್ಟು ಜನರಿಗೆ ಗೊತ್ತಿಲ್ಲದಿರುವುದೂ ಕೂಡ ಕಾರಣವಾಗಿದೆ.

ಇದರ ನಡುವಲ್ಲೇ ನ್ಯಾಯಯುತ ಹಾಗೂ ಜವಾಬ್ದಾರಿಯುತ ನೀರು ಬಳಕೆಗೆ ನೀರಿನ ದರ ಪರಿಷ್ಕರಣೆ ಮಾಡಬೇಕೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಗೆ ಜಲ ತಜ್ಞರು ಒತ್ತಾಯಿಸಿದ್ದಾರೆ.

ಕನಿಷ್ಠ 8,000 ಲೀಟರ್‌ ವರೆಗಿನ ನೀರು ಬಳಕೆಗೆ ಯಾವುದೇ ಏರಿಕೆಗಳು ಬೇಡ. ಆದರೆ, ಅದಕ್ಕಿಂತ ಹೆಚ್ಚು ನೀರು ಬಳಕೆ ಮಾಡುವವರಿಗೆ ದರ ಏರಿಕೆ ಮಾಡಬೇಕೆಂದು ಹೇಳಿದ್ದಾರೆ.

ದರ ಪರಿಷ್ಕರಣೆಯಿಂದ ಜನರು ನೀರನ್ನು ವಿವೇಚನಾಯುಕ್ತವಾಗಿ ಬಳಸಲು ಮತ್ತು ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವತ್ತ ಗಮನಹರಿಸುವತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಮಳೆನೀರು ಕೊಯ್ಲು ತಜ್ಞ ಎಆರ್ ಶಿವಕುಮಾರ್ ಅವರು ಮಾತನಾಡಿ, ಅಂತರ್ಜಲ ಹೆಚ್ಚಳ ಮಾಡುವುದಕ್ಕಿಂತಲೂ ಅಂತರ್ಜಲ ಬಳಕೆಯ ಪ್ರಮಾಣವೇ ಬೆಂಗಳೂರಿನಲ್ಲಿ ಹೆಚ್ಚಾಗಿ ಹೋಗಿದೆ. ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಕೊರತೆಯ ಬಗ್ಗೆ ಸಾಕಷ್ಟು ಕೂಗು ಕೇಳಿಬರುತ್ತಿದೆ. ನಮ್ಮಲ್ಲಿ ಹಲವರ ಮನೆಗಳ ಟ್ಯಾಂಕ್‌ಗಳು ನೀರು ತುಂಬಿ ಹರಿಯುವುದನ್ನು ನೋಡುತ್ತಿರುತ್ತೇವೆ. ನೆರೆಹೊರೆಯವರು ಅಮೂಲ್ಯ ನೀರನ್ನು ನಿರ್ಲಕ್ಷ್ಯ ರೀತಿಯಲ್ಲಿ ಬಳಕೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕರು ನೀರಿನ ದರವನ್ನು ಏರಿಕೆ ಮಾಡಬೇಕು. ಇದರಿಂದ ನಿಯಂತ್ರಣ ತರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು ನೀರು ಬಿಕ್ಕಟ್ಟು ನಡುವಲ್ಲೇ ಗಮನ ಸೆಳೆಯುತ್ತಿದೆ ಯಡಿಯೂರಿನ ಜಲಸಂರಕ್ಷಣಾ ಕ್ರಮ!

ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗುತ್ತದೆ. ಆದರೆ, ಅದನ್ನು ಸಂರಕ್ಷಿಸಿ, ಬಳಸಿ, ಅಂತರ್ಜಲ ಹೆಚ್ಚಿಸುವ ವಿಧಾನಗಳನ್ನು ಅನುಸರಿಸುವ ಮೂಲಕ ಸಮಸ್ಯೆ ನಿವಾರಿಸಬಹುದು. ಮಳೆ ನೀರು ಕೊಯ್ಲು ಬದಲು ಸಾಕಷ್ಟು ಜನರು ದಂಡವನ್ನು ಪಾವತಿ ಮಾಡುತ್ತಿದ್ದಾರೆ. ಮಳೆ ನೀರು ಬಳಕೆ ಆರಂಭಿಸಲು ನೀರಿನ ದರ ಹೆಚ್ಚಳ ಮಾಡುವ ಅಗತ್ಯವಿದೆ. 8,000 ಲೀಟರ್‌ಗಿಂತ ಹೆಚ್ಚಿನ ನೀರು ಬಳಕೆಯ ಮೇಲೆ ದರ ಹೆಚ್ಚಳ ಮಾಡಬೇಕು. ಇದು ನೀರನ್ನು ನ್ಯಾಯಯುತವಾಗಿ ಬಳಸಲು ಮತ್ತು ಜಲ ಸಂರಕ್ಷಣೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಫ್ರೆಂಡ್ಸ್ ಆಫ್ ಲೇಕ್ಸ್‌ನ ಸಹ ಸಂಸ್ಥಾಪಕ ಮತ್ತು ಸಂಚಾಲಕ ರಾಮ್ ಪ್ರಸಾದ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ನೀಡುವ 5 ಗ್ಯಾರಂಟಿ ಯೋಜನೆಗಳನ್ನು ಬಿಡಿ, ನೀರಿಗೆ ಹೆಚ್ಚು ಸಬ್ಸಿಡಿ ನೀಡಿದರೆ, ಇದು 5 ಗ್ಯಾರಂಟಿ ಯೋಜನೆಗಳನ್ನೂ ಹಿಂದಿಕ್ಕುತ್ತದೆ ಎಂದು ತಿಳಿಸಿದ್ದಾರೆ.

ನಗರದಿಂದ 100 ಕಿ.ಮೀ ದೂರದಲ್ಲಿರುವ ಟಿ.ಕೆ.ಹಳ್ಳಿಯಿಂದ ಒಂದು ಕಿಲೋ ಲೀಟರ್ ನೀರು ಸರಬರಾಜು ಮಾಡಲು ಪ್ರತಿ ಕಿಲೋ ಲೀಟರ್‌ಗೆ 95 ರೂ ವೆಚ್ಚವಾಗುತ್ತದೆ. ನಗರಕ್ಕೆ ನೀರು ಹರಿಸಲು ಜಲಮಂಡಳಿ ವಿದ್ಯುತ್ ಶುಲ್ಕವಾಗಿ ಕೋಟಿಗಟ್ಟಲೆ ಪಾವತಿಸುತ್ತಿದೆ. ಆದರೆ, ಜಲಮಂಡಳಿಯು ಗ್ರಾಹಕರಿಗೆ 7 ರೂ.ಗೆ 8,000 ನೀರು ಪೂರೈಸುತ್ತಿದೆ, 8,001-25,000 ಲೀಟರ್ ಸ್ಲ್ಯಾಬ್‌ನಲ್ಲಿ 1 ಕಿಲೋ ಲೀಟರ್‌ಗೆ 11 ರೂ, 25,001-50,000 ಲೀಟರ್‌ಗೆ 26 ರೂ, ಮತ್ತು 50,000 ಲೀಟರ್‌ಗಿಂತ ಹೆಚ್ಚಿನ ಬಳಕೆಗೆ 45 ರೂ, ನೀರು ಪೂರೈಸುತ್ತಿದೆ.

ಸಂಗ್ರಹ ಚಿತ್ರ
ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಬೇಸಿಗೆಯಲ್ಲೂ ಹೇರಳ ನೀರು! ಕಾರಣ ಇಲ್ಲಿದೆ...

ನೀರು ಜನರ ಹಕ್ಕು. ಜಲಮಂಡಳಿಯು ಮೊದಲ ಸ್ಲ್ಯಾಬ್ (0-8,000 ಲೀಟರ್) ವರೆಗೆ ನಾಮಮಾತ್ರವಾಗಿ ಶುಲ್ಕ ವಿಧಿಸಬೇಕು. ಆ ಸ್ಲ್ಯಾಬ್‌ಗಿಂತ ಹೆಚ್ಚಿನ ಶುಲ್ಕ ವಿಧಿಸಬೇಕು. ಅನೇಕ ಐಷಾರಾಮಿ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಲ್ಲಿನ ಜನರು ನೀರನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ. ಬಿಡಬ್ಲ್ಯೂಎಸ್‌ಎಸ್‌ಬಿ ಸರಬರಾಜು ಮಾಡುವ ನೀರು ಅವರಿಗೆ ಅಗ್ಗವಾಗಿರುವುದರಿಂದ 300 ಎಲ್‌ಪಿಸಿಡಿಗಿಂತ ಹೆಚ್ಚು ನೀರನ್ನು ಬಳಕೆ ಮಾಡುತ್ತಿದ್ದಾರೆ. ಬಡವರಾಗಲೀ, ಶ್ರೀಮಂತರಾಗಲೀ ನೀರಿನ ಶುಲ್ಕ ಒಂದೇ ಆಗಿದೆ ಎಂದು ರಾಮ್ ಪ್ರಸಾದ್ ಹೇಳಿದ್ದಾರೆ.

ಜಲಮಂಡಳಿ ಅಧಿಕಾರಿಗಳು ಮಾತನಾಡಿ, ನೀರಿನ ದರ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಒಪ್ಪಿಗೆ ನೀಡಿದರೆ ದರ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com