ನಕಲಿ ಇ-ಬ್ಯಾಂಕ್ ಗ್ಯಾರಂಟಿಗಳಿಂದ ಬ್ಯಾಂಕ್'ಗಳಿಗೆ 168 ಕೋಟಿ ರೂ. ವಂಚನೆ: ಲೆಕ್ಕಪರಿಶೋಧಕ ಬಂಧನ

ಬ್ಯಾಂಕ್ ಸಾಲಗಳಿಗೆ ನೀಡಲಾಗುವ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಬರೋಬ್ಬರಿ 168 ಕೋಟಿ ರೂ. ವಂಚಿಸಿ, ವಿದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬ್ಯಾಂಕ್ ಸಾಲಗಳಿಗೆ ನೀಡಲಾಗುವ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಬರೋಬ್ಬರಿ 168 ಕೋಟಿ ರೂ. ವಂಚಿಸಿ, ವಿದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಉತ್ತರಪ್ರದೇಶದ ನೋಯ್ಡಾನಗರದ ಆಶೀಶ್ ಸಕ್ಸೇನಾ ಅಲಿಯಾಸ್ ಆಶೀಶ್ ರಾಯ್ ಬಂಧಿತ ಆರೋಪಿ. ಆರೋಪಿಯಿಂದ 2 ಲ್ಯಾಪ್ ಟಾಪ್ ಗಳು, 6 ಮೊಬೈಲ್ ಗಳು, ಒಂದು ಪೆನ್ ಡ್ರೈವ್ ಹಾಗೂ 10 ವಿವಿಧ ಬ್ಯಾಂಕ್ ಗಳ ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ,

ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಪಡೆಯುವ ಸಾಲಗಳಿಗೆ ಸಂಬಂಧಪಟ್ಟವರು ನೀಡುವ ಇ-ಬ್ಯಾಂಕ್ ಗ್ಯಾರಂಟಿಗಳ ನೈಜತೆಯನ್ನು ರಾಷ್ಟ್ರೀಯ ಇ -ಗೌರ್ವನ್ಸ್ ಸರ್ವಿಸ್ ಲಿಮಿಟೆಡ್ (ಎನ್ಇಎಸ್ಎಲ್) ಎಂಬ ಅರೆ ಸರ್ಕಾರಿ ನೋಂದಾಯಿತ ಸಂಸ್ಥೆ ಪರಿಶೀಲನೆ ನಡೆಸುತ್ತದೆ.

ಸಂಗ್ರಹ ಚಿತ್ರ
ಬಿಎಂಟಿಸಿ ಬಸ್ ನಲ್ಲಿ ಮಹಿಳೆ ಮೇಲೆ ಹಲ್ಲೆ: ಕಂಡಕ್ಟರ್ ಬಂಧನ, ಸೇವೆಯಿಂದ ಅಮಾನತು

ಪರಿಶೀಲನೆಯ ವೇಳೆ 168,13,23,994 ರೂ. ಸಾಲ ಪಡೆಯಲು 11 ವ್ಯಕ್ತಿಗಳು ನೀಡಿರುವ ಬ್ಯಾಂಕ್ ಗ್ಯಾರಂಟಿ ನಕಲಿ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎನ್ಇಎಸ್ಎಲ್ ಅಧಿಕಾರಿ ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು 11 ವ್ಯಕ್ತಿಗಳು ನೀಡಿದ ದಾಖಲಾತಿಗಳು, ಮೊಬೈಲ್ ನಂಬರುಗಳು ಹಾಗೂ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ಐಸಿಐಸಿಐ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಹೆಸರಿನಲ್ಲಿ ನೀಡಲಾಗಿದೆ ಎಂದು ಹೇಳಲಾದ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ 11 ಜನರ ಸಾಲಕ್ಕೆ ಖಾತ್ರಿಯನ್ನಾಗಿ ಒದಗಿಸಿದ್ದಾರೆ. ಇ-ಬ್ಯಾಂಕ್ ಗ್ಯಾರಂಟಿ ಸೇವೆ ನೀಡಲು ಸಾಲ ಪಡೆದವರಿಂದ ಆರೋಪಿಗಳು 5 ಕೋಟಿ ರೂ.ಗಳ ಕಮಿಷನ್ ಪಡೆದಿರುವುದು ಪತ್ತೆಯಾಗಿದೆ.

ಸಂಗ್ರಹ ಚಿತ್ರ
ತುಮಕೂರು: ಕಾರಿನಲ್ಲಿ ಮೂವರನ್ನು ಸುಟ್ಟಿದ್ದ ಪ್ರಕರಣ; ನಿಧಿ ವಿಚಾರವಾಗಿ ಹತ್ಯೆ, ಇಬ್ಬರ ಬಂಧನ

ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ನವದೆಹಲಿ, ಉತ್ತರ ಪ್ರದೇಶದ ನೊಯಿಡಾ ಸೇರಿದಂತೆ ಹಲವು ಕಡೆ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಒಬ್ಬ ಆರೋಪಿ ಕುವೈತ್ನಲ್ಲಿರುವುದು ದೃಢಪಟ್ಟಿತ್ತು. ಕೇಂದ್ರ ಗೃಹಸಚಿವಾಲಯದ ಸಹಕಾರದಲ್ಲಿ ಲುಕ್ ಔಟ್ ಸಕ್ರ್ಯೂಲರ್ ಹೊರಡಿಸಿ ಸದರಿ ಆರೋಪಿಯನ್ನು ಇತ್ತೀಚೆಗೆ ಕುವೈತ್ನಿಂದ ಹಸ್ತಾಂತರ ಪಡೆದುಕೊಂಡು ದೆಹಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳ ಸಹಾಯದಿಂದ ಆಶೀಶ್ ನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಈ ಖತರ್ನಾಕ್ ಆರೋಪಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿದ್ದು, ನೊಂದ ವ್ಯಕ್ತಿಗಳ ದೂರು ಆಧರಿಸಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಗುಜರಾತ್, ದೆಹಲಿಯಲ್ಲಿಯೂ ಆರೋಪಿಗಳು ಬ್ಯಾಂಕ್ ಸಾಲದ ಖಾತ್ರಿ ಹೆಸರಿನಲ್ಲಿ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಅಂತಾರಾಜ್ಯ ಮಟ್ಟದ ಈ ಹಗರಣದ ಬೆನ್ನತ್ತಿರುವ ಪೊಲೀಸರು ಬ್ಯಾಂಕ್ ಖಾತೆಗಳಿಗೆ ಮೂರನೇ ವ್ಯಕ್ತಿಯಿಂದ ಸೇವೆ ಪಡೆಯುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com