
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ನಿಲಯದಲ್ಲಿ ಪದೇ ಪದೇ ನೀರಿನ ಸಮಸ್ಯೆಯಿಂದ ಬೇಸರಗೊಂಡ ವಿದ್ಯಾರ್ಥಿನಿಯರು ಶನಿವಾರ ಬೆಳಗ್ಗೆ ವಿವಿಯ ಮುಖ್ಯ ರಸ್ತೆಯನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಖಾಲಿ ಬಕೆಟ್ ಗಳನ್ನು ಹಿಡಿದುಕೊಂಡು ರಸ್ತೆ ಮಧ್ಯದಲ್ಲಿ ಕುಳಿತ ವಿದ್ಯಾರ್ಥಿನಿಯರು, ನೀರು ಪೂರೈಕೆ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳನ್ನು ವಿವಿ ಅಧಿಕಾರಿಗಳ ನಿರ್ಲಕ್ಷ್ಯತನ ಖಂಡಿಸಿ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಪದೇ ಪದೇ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬಿಸಿ ನೀರು ಕೂಡ ಸರಿಯಾಗಿ ಬರುವುದಿಲ್ಲ. ಇನ್ನು ಹಾಸ್ಟೆಲ್ ಊಟದ ಗುಣಮಟ್ಟವೂ ಕುಸಿತವಾಗಿದೆ.ಮೇಲ್ವಿಚಾರಕರು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಲ್ಲ. ಹೀಗಾಗಿ ಹಾಸ್ಟೆಲ್ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ ಎಂದು ದೂರಿದರು.
ಕಳೆದ ಒಂಬತ್ತು ತಿಂಗಳಿಂದ ನೀರಿನ ಕೊರತೆ ಎದುರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಕೊರತೆಯ ಕಾರಣ ಅಶುಚಿಯಾದ ಶೌಚಾಲಯಗಳ ಬಳಕೆ ಮಾಡಿ ಸೋಂಕುಗಳು ಎದುರಾಗುತ್ತಿವೆ. ಗುಣಮಟ್ಟದ ಆಹಾರ ಕೂಡ ನೀಡಲಾಗುತ್ತಿಲ್ಲ. ವಾರದಲ್ಲಿ ಎರಡು ಬಾರಿ ಮಾತ್ರ ಸ್ನಾನ ಮಾಡುವಂತಾಗಿದೆ. ಈ ಬಗ್ಗೆ ವಾರ್ಡನ್ ಮತ್ತು ವ್ಯವಸ್ಥಾಪಕರಿಗೆ ಹಲವಾರು ಬಾರಿ ದೂರು ನೀಡಿದ್ದೇವೆ, ಆದರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ವಿ-ಸಿಯನ್ನು ಸಂಪರ್ಕಿಸಿದಾಗಲೆಲ್ಲಾ, ಅವರು ಕಾರ್ಯನಿರತರಾಗಿದ್ದಾರೆ ಅಥವಾ ಈ ಸಮಯದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಅವರ ಕಚೇರಿ ನಮಗೆ ತಿಳಿಸುತ್ತದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ,
ಏತನ್ಮಧ್ಯೆ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮರಗಳು ನೆಲಸಮವಾಗಿದ್ದು, ಹಲವಾರು ವಿದ್ಯುತ್ ಕಂಬಗಳೂ ಕೂಡ ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ವ್ಯತ್ಯಯವಾಗಿದ್ದು, ಇದೂ ಕೂಡ ನೀರಿನ ಕೊರತೆಗೆ ಕಾರಣವಾಗಿದೆ ಎಂದು ಹೇಳಲಾಗತ್ತಿದೆ.
ಹಾಸ್ಟೆಲ್‌ನಲ್ಲಿ ಎರಡು ಟ್ಯಾಂಕ್‌ಗಳನ್ನು ಇರಿಸಲಾಗಿದ್ದು, ಈ ನೀರು 600 ಮಂದಿಗೆ ಸಾಕಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಶನಿವಾರ 18 ಗಂಟೆಗಳ ಕಾಲ ವಿದ್ಯುತ್ ಮತ್ತು ನೀರು ಲಭ್ಯವಿರಲಿಲ್ಲ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಮತ್ತು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರದಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. ಈ ಸಮಸ್ಯೆಗಳು ನಮ್ಮ ಓದಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಿದ್ದಾರೆ.
ಮೊದಲ ವರ್ಷದ ಎಂಎ ವಿದ್ಯಾರ್ಥಿನಿ ರಂಜಿತಾ ಎಂಬುವವರು ಮಾತನಾಡಿ, ಆರು ತಿಂಗಳ ಹಿಂದೆ ಹಾಸ್ಟೆಲ್‌ಗೆ ಸೇರಿದ್ದೆ. ಅಂದಿನಿಂದಲೂ ನಾನು ವಾರ್ಡನ್ ಅನ್ನು ನೋಡಿಲ್ಲ. ಹಾಸ್ಟೆಲ್ ಅಶುದ್ಧವಾಗಿದೆ. ಅಡುಗೆ ಮನೆಯನ್ನು ಕೂಡ ನೈರ್ಮಲ್ಯ ಸ್ಥಿತಿಯಲ್ಲಿ ಇಡಲಾಗಿಲ್ಲ. ವಾಟರ್ ಪ್ಯೂರಿಫೈಯರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಉಪಕುಲಪತಿ ಜಯಕರ ಎಸ್‌ಎಂ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ, ನೀರಿನ ಕೊರತೆಯನ್ನು ನಿವಾರಿಸಲು ಬೋರ್‌ವೆಲ್ ಕೊರೆಯಲು ಯೋಜಿಸುತ್ತಿದ್ದೇವೆಂದು ತಿಳಿಸಿದ್ದಾರೆ.
Advertisement