ಪ್ರೇತ ವಧುವಿಗೆ ವರ ಬೇಕಾಗಿದ್ದಾನೆ: ವೈರಲ್‌ ಆಯ್ತು ಮದುವೆ ಜಾಹೀರಾತು!

ಪ್ರೇತ ಮದುವೆ ಎನ್ನುವುದು ಕರಾವಳಿಯಲ್ಲಿ ಸಾಮಾನ್ಯ ವಿಚಾರವಾದರೂ ಈ ಬಗ್ಗೆ ವರ ಬೇಕು ಎಂದು ಜಾಹೀರಾತು ನೀಡಿರುವುದು ಇದೇ ಮೊದಲು ಎನ್ನಲಾಗಿದೆ.
ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಜಾಹೀರಾತು.
ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಜಾಹೀರಾತು.
Updated on

ಮಂಗಳೂರು: ಮದುವೆಗಾಗಿ ವರ ಅಥವಾ ವಧು ಬೇಕೆಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಸಾಮಾನ್ಯ. ಇದಕ್ಕಾಗಿಯೇ ಪತ್ರಿಕೆಗಳಲ್ಲಿ ಮೆಟ್ರಿಂಮೋನಿಯಲ್‌ ಕಾಲಂ ಕೂಡ ಇರುತ್ತದೆ. ವಧು-ವರರನ್ನು ಹುಡುಕಿಕೊಡುವ ನೂರಾರು ಜಾಲತಾಣಗಳೂ ಕೂಡ ಇವೆ. ಆದರೆ, ಕರಾವಳಿಯ ಪತ್ರಿಕೆಯೊಂದರಲ್ಲಿ ಬಂದ ಮದುವೆಯ ಜಾಹೀರಾತೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಕೆಲವರು ತಮ್ಮ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ಜಾಹೀರಾತಿನ ಬಗ್ಗೆ ಬರೆದುಕೊಂಡು ವೈರಲ್‌ ಮಾಡಿದ್ದಾರೆ.

ಇಷ್ಟಕ್ಕೂ ಏನಿದು ಜಾಹೀರಾತು ಅಂತೀರಾ, ಅದುವೇ ಪ್ರೇತ ಮದುವೆಯ ಜಾಹೀರಾತು. ದಿನಪತ್ರಿಕೆಯೊಂದರಲ್ಲಿ ಪ್ರೇತ ಮದುವೆಗೆ ವರ ಬೇಕಿದೆ ಎನ್ನುವ ಜಾಹೀರಾತು,

ಬಂಗೇರ ಬದಿಯ 30 ವರ್ಷಗಳ ಹಿಂದೆ ತೀರಿ ಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷಗಳ ಹಿಂದೆ ತೀರಿಹೋದ ಗಂಡಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ, ದಯವಿಟ್ಟು ಸಂಪರ್ಕಿಸಿ ಎಂದು ಕುಟುಂಬವೊಂದು ಜಾಹೀರಾತು ನೀಡಿದೆ. ಈ ಜಾಹೀರಾತು ಇದೀಗ ವೈರಲ್ ಆಗಿದೆ.

ಪ್ರೇತ ಮದುವೆ ಎನ್ನುವುದು ಕರಾವಳಿಯಲ್ಲಿ ಸಾಮಾನ್ಯ ವಿಚಾರವಾದರೂ ಈ ಬಗ್ಗೆ ವರ ಬೇಕು ಎಂದು ಜಾಹೀರಾತು ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಜಾಹೀರಾತು.
ಬೆಂಗಳೂರು: ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

ಪ್ರೇತ ಮದುವೆ ಎನ್ನುವುದು ಕರಾವಳಿ ಭಾಗದಲ್ಲಿ ತುಳುವರು ಆಚರಿಸುವ ವಿಶಿಷ್ಟ ಸಂಪ್ರದಾಯವಾಗಿದೆ. ವಿವಾಹಿತರಾಗುವ ಮೊದಲೇ ಯಾವುದೇ ಯುವಕ, ಯುವತಿ ಮೃತಪಟ್ಟರೆ, ಅವರ ಕುಟುಂಬದಲ್ಲಿ ಮದುವೆಗೆ ಬಂದ ಯುವಕ-ಯುವತಿಯರಿಗೆ ಈ ಪ್ರೇತ ತೊಂದರೆ ಕೊಡುತ್ತದೆ. ಕುಟುಂಬದಲ್ಲಿ ಮದುವೆ ಪ್ರಾಯಕ್ಕೆ ಬಂದವರಿಗೆ ಮದುವೆ ಆಗದಿರಲು ಈ ಪ್ರೇತಗಳೇ ಕಾರಣ ಎನ್ನುವ ನಂಬಿಕೆ ಇದೆ.

ಹೀಗಾಗಿ ಆ ಪ್ರೇತಗಳನ್ನು ಸಂತೃಪ್ತಿಪಡಿಸಲು ಮದುವೆ ಮಾಡಿಸಲು ಆ ಕುಟುಂಬದವರು ಮುಂದಾಗುತ್ತಾರೆ. ಇದರಿಂದ ತಮ್ಮ ಕುಟುಂಬಕ್ಕಾಗಲಿ, ಮುಂದಿನ ಪೀಳಿಗೆಗಾಲಿ ಯಾವುದೇ ತೊಂದರೆ ಬರುವುದಿಲ್ಲ ಎನ್ನುವುದು ಇದರ ಉದ್ದೇಶವಾಗಿದೆ.

ಪ್ರೇತಗಳ ಮದುವೆಗೆ ಕೂಡ ಅದೇ ಪ್ರಾಯದ ಹುಡುಗ, ಹುಡುಗಿ ಬೇಕಾಗುತ್ತದೆ. ಅದಕ್ಕೇ ವಿಶೇಷವಾದ ಹುಡುಕಾಟ ನಡೆಸಲಾಗುತ್ತದೆ. ಪ್ರೇತಗಳ ಮದುವೆ ಎಂದಾಕ್ಷಣ ಅದೇನೂ ಸುಮ್ಮನೆ ಆಗುವುದಿಲ್ಲ, ಸಂಪ್ರದಾಯದ ಪ್ರಕಾರವೇ ಎಲ್ಲ ಶಾಸ್ತ್ರಗಳನ್ನು ನೆರವೇರಿಸಬೇಕಾಗುತ್ತದೆ. ಪ್ರೇತಗಳ ಮದುವೆ ಮಾಡಿಸಲು ಆಷಾಢದ ಒಂದು ದಿನ ಮದುವೆ ನಿಗದಿ ಮಾಡಲಾಗುತ್ತದೆ. ಮದುವೆ ದಿನ ಗೊತ್ತು ಮಾಡಿದ ಬಳಿಕ ಕುಟುಂಬದವರಿಗೆ ಆಹ್ವಾನ ನೀಡಲಾಗುತ್ತದೆ. ಜೀವಂತ ಇರುವವರಿಗೆ ಮದುವೆ ಮಾಡಿಸಿದಂತೆ ಶಾಸ್ತ್ರೋಕ್ತವಾಗಿಯೇ ಮದುವೆ ನಡೆಯುತ್ತದೆ. ಆದರೆ. ಈ ಮದುವೆಯಲ್ಲಿ ಹೋಮ ಹವನ ಮಾಡುವುದಿಲ್ಲ, ಮಂತ್ರ ಹೇಳಲು ಪುರೋಹಿತರು ಇರುವುದಿಲ್ಲ. ಬದಲಾಗಿ ಎರಡು ಕುರ್ಚಿ, ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಶಾಸ್ತ್ರ ನೆರವೇರಿಸಲಾಗುತ್ತದೆ.

ಸಂಪ್ರದಾಯದಂತೆ ಹುಡುಗಿಗೆ ರೇಷ್ಮೆ ಸೀರೆ, ತಾಳಿ, ಹೂವು ಮತ್ತು ಹುಡುಗನಿಗೆ ಪಂಚೆ, ಶಲ್ಯ ಎಲ್ಲವನ್ನೂ ತಂದು ಮದುವೆ ಮಾಡಲಾಗುತ್ತದೆ. ಮದುವೆ ಬಳಿಕ ಅತಿಥಿಗಳಿಗೆ ಊಟ ಕೂಡ ಹಾಕಲಾಗುತ್ತದೆ. ಪ್ರೇತಗಳಿಗೆ ಮದುವೆ ಮಾಡಿಸಿದ ಎರಡೂ ಕುಟುಂಬಗಳು ಕೂಡ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತವೆ. ಆದರೆ ಇವೆಲ್ಲಾ ಹಿಂದೆ ಕುಟುಂಬಕ್ಕೆ ಸೀಮಿತವಾಗಿ ಗೌಪ್ಯವಾಗಿ ನಡೆಯುತ್ತಿತ್ತು, ಆದರೆ, ಕಳೆದ ಕೆಲವು ವರ್ಷಗಳಿಂದ ಇದು ಮುಕ್ತವಾಗಿ ನಡೆಯುತ್ತಿದೆ. ಹಾಗಾಗಿ ಈ ಆಚರಣೆ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com