ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಸಿಹಿ ತಯಾರಿಕಾ ಕಂಪನಿಯೊಂದರಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಗುರುವಾರ ಮೃತಪಟ್ಟಿದ್ದಾರೆ.
ಮೃತರನ್ನು ನವೀನ್ ಮತ್ತು ಅವರ ಸೋದರ ಸಂಬಂಧಿ ಲಿಂಗರಾಜು ಎಂದು ಗುರುತಿಸಲಾಗಿದೆ, ಇಬ್ಬರೂ 26 ವರ್ಷ ವಯಸ್ಸಿನವರಾಗಿದ್ಗುಸ ತುಮಕೂರು ಜಿಲ್ಲೆಯ ಪಾವಗಡ ಬಳಿಯ ಮಧುಗಿರಿ ಮತ್ತು ಮಡಕಶಿರದ ಮೂಲದವರಾಗಿದ್ದಾರೆ.
ಸಿಹಿ ತಯಾರಿಕಾ ಕಂಪನಿಯು ಇತ್ತೀಚೆಗೆ ದಾಬಸ್‌ಪೇಟೆಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ಹೊಸ ಎಸ್‌ಟಿಪಿ ನಿರ್ಮಿಸಿ ಅದರ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಿತ್ತು. ನವೀನ್ ಮತ್ತು ಲಿಂಗರಾಜು ಈ ಖಾಸಗಿ ಸಂಸ್ಥೆಯ ನೌಕರರಾಗಿದ್ದರು.
ಸಂಜೆ 6.15ರ ಸುಮಾರಿಗೆ ಟ್ಯಾಂಕ್ ಬಾಗಿಲು ತೆರೆದಿದ್ದು, ಈ ವೇಳೆ ನವೀನ್ ಆಕಸ್ಮಿಕವಾಗಿ ಬಿದ್ದಿದ್ದಾನೆ. ಎಸ್‌ಟಿಪಿ ಘಟಕ 12 ಅಡಿ ಇದ್ದು, ಈ ವೇಳೆ ನವೀನ್‌ನನ್ನು ಹೊರತೆಗೆಯಲು ಯತ್ನಿಸಿದ ಲಿಂಗರಾಜು ಕೂಡ ಅದರಲ್ಲಿ ಬಿದ್ದಿದ್ದಾನೆ. ಈ ವೇಳೆ ಇಬ್ಬರು ಉಸಿರುಪಟ್ಟಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಘಟನೆ ಬಳಿಕ ಖಾಸಗಿ ಸಂಸ್ಥೆಯ ಮಾಲೀಕ ರಮೇಶ್ ಹಾಗೂ ಎಸ್‌ಟಿಪಿ ಉಸ್ತುವಾರಿ ವಹಿಸಿಕೊಂಡಿರುವ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನೂ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ. ಸಾವಿಗೆ ಕಾರಣಗಳನ್ನು ತಿಳಿಯಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement