ಬೆಂಗಳೂರು: ಸ್ಕೂಟರ್ ನಲ್ಲಿ ಸಾಗುತ್ತಾ ಪಟಾಕಿ ಸಿಡಿಸಿ ಪುಂಡಾಟ ಪ್ರದರ್ಶಿಸಿದ ಇಬ್ಬರು ವ್ಯಕ್ತಿಗಳನ್ನು ಹೆಣ್ಣೂರು ಸಂಚಾರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸವಾರನನ್ನು ಕಾಡುಗೊಂಡನಹಳ್ಳಿ ನಿವಾಸಿ ಎಸ್ ಆದಿತ್ಯ ಮತ್ತು ಥಣಿಸಂದ್ರದ ಅಮರ ಜ್ಯೋತಿ ಲೇಔಟ್ ನಿವಾಸಿ ವಿ ಅಕ್ಷಯ್ ಕುಮಾರ್ (18) ಎಂದು ಗುರುತಿಸಲಾಗಿದೆ. ಆದಿತ್ಯ ಪಿಯು ವಿದ್ಯಾರ್ಥಿಯಾಗಿದ್ದರೆ, ಅಕ್ಷಯ್ ಎಂಜಿನಿಯರಿಂಗ್ ವಿದ್ಯಾರ್ಥಿ.
ಆದಿತ್ಯ ಸ್ಕೂಟರ್ ಓಡಿಸುತ್ತಿದ್ದು, ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಅಕ್ಷಯ್ ಪಟಾಕಿಗಳನ್ನು ಸಿಡಿಸಿ ರಸ್ತೆಗೆ ಎಸೆದು ಪುಂಡಾಟ ಪ್ರದರ್ಶಿಸಿದ್ದ.
ಇಬ್ಬರೂ ಹೆಲ್ಮೆಟ್ ಧರಿಸದೇ, ಅಡ್ಡಾದಿಡ್ಡಿಯಾಗಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಇಬ್ಬರು ಆರೋಪಿಗಳು ಪಟಾಕಿ ಅಂಟಿಸಿ ರಸ್ತೆಯಲ್ಲಿ ಕಂಡಕಂಡವರತ್ತ ಎಸೆಯುತ್ತ ಸಾಗುತ್ತಿದ್ದು, ಕಿಡಿಗೇಡಿಗಳ ಪುಂಡಾಟವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಕುರಿತು ಕೂಡಲೇ ಕಾರ್ಯಪ್ರವೃತ್ತರಾದ ಹೆಣ್ಣೂರು ಸಂಚಾರ ಪೊಲೀಸರು, ಎಲೆಕ್ಟ್ರಿಕ್ ಸ್ಕೂಟರ್ ನೊಂದಣಿ ಸಂಖ್ಯೆ ಆಧರಿಸಿ ಇಬ್ಬರನ್ನು ಪತ್ತೆ ಹಚ್ಚಿ, ಹೆಲ್ಮೆಟ್ ರಹಿತ ಚಾಲನೆ, ಹಿಂಬದಿ ಸವಾರನ ಹೆಲ್ಮೆಟ್ ರಹಿತ ಪ್ರಯಾಣ, ಪರವಾನಗಿ ರಹಿತವಾಗಿ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ಚಾಲನೆ, ಸಂಚಾರಕ್ಕೆ ಅಡಚಣೆ, ಜಿಗ್ ಜಾಗ್ ಡ್ರೈವಿಂಗ್, ಲೇನ್ ಶಿಸ್ತು ಉಲ್ಲಂಘನೆಯಡಿ ಪ್ರಕರಣ ದಾಖಲಿಸಿ, ಇಬ್ಬರಿಂದ 5,500 ರೂ ದಂಡ ವಸೂಲಿ ಮಾಡಿದ್ದಾರೆ. ಮುಂದಿನ ಕ್ರಮಕ್ಕಾಗಿ ಕಾನೂನು ಸುವ್ಯವಸ್ಥೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಪಟಾಕಿ ಸಿಡಿಸುವುದಲ್ಲದೆ, ಹೆಲ್ಮೆಟ್ ಧರಿಸದಿರುವುದು, ರಸ್ತೆಯಲ್ಲಿ ಅಪಾಯಕಾರಿ ಕೃತ್ಯಗಳನ್ನು ಎಸಗುವುದು ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ರೀತಿ ವಿ.ವಿ.ಪುರಂ ವ್ಯಾಪ್ತಿಯಲ್ಲಿಯೂ ಸಹ ಕಿಡಿಗೇಡಿಯೊಬ್ಬ ಪಟಾಕಿ ಹಚ್ಚಿ ಮಕ್ಕಳ ಬಳಿ ಎಸೆದಿದ್ದಾನೆ. ಸಂಚಾರಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಾಲನೆ ಜೊತೆ ದಾರಿಯಲ್ಲಿ ಪಟಾಕಿ ಎಸೆಯುತ್ತಿರುವುದರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಳಕೆದಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
Advertisement