ಬೆಂಗಳೂರು: ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ ಎರಡೂವರೆ ವರ್ಷದ ಮಗು ವೈಯಾಲಿಕಾವಲ್ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಮರಳಿ ಪೋಷಕರ ಮಡಿಲು ಸೇರಿದೆ.
ಮಗುವನ್ನು ಕರೆದೊಯ್ದಿದ್ದ ಹುಲಿಯೂರುದುರ್ಗ ಮೂಲದ ಸುಮಾ (ಹೆಸರು ಬದಲಾಯಿಸಲಾಗಿದೆ) ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆಕೆ ಮಾನಸಿಕ ಅಸ್ವಸ್ಥೆ ಎಂಬುದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ 9.20ರ ಸುಮಾರಿಗೆ ಬಾಲಕಿ ಪೈಪ್‌ಲೈನ್ ರಸ್ತೆ ಬಳಿಯಿರುವ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೋಷಕರು ತಮ್ಮ ಹಿರಿಯ ಮಗುವನ್ನು ಶಾಲೆಗೆ ಕಳುಹಿಸುವ ಕೆಲಸದಲ್ಲಿ ತೊಡಗಿದ್ದು, ಮತ್ತೊಂದು ಮಗುವಿನ ಬಗ್ಗೆ ಗಮನ ನೀಡಿಲ್ಲ. ಇದೇ ವೇಳೆ ಆಟವಾಡುತ್ತಿದ್ದ ಮಗು ಸುಮಾರು ಅರ್ಧ ಕಿ.ಮೀ ಮುಂದಕ್ಕೆ ಹೋಗಿದೆ. ಈ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಸುಮಳನ್ನು ಅಮ್ಮ ಎಂದು ಕೈ ಹಿಡಿದುಕೊಂಡಿದೆ. ಈ ವೇಳೆ ಮಗುವನ್ನು ಸುಮಾ ಕರೆದುಕೊಂಡು ಮುಂದಕ್ಕೆ ಕರೆದುಕೊಂಡು ಹೋಗಿದ್ದಾಳೆ.
ಈ ನಡುವೆ ಮಗು ಕಾಣದಿರುವುದಕ್ಕೆ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದ ಪೊಲೀಸರಿಗೆ ಶುಕ್ರವಾರ ಬೆಳಗಿನ ಜಾವ ದೇವಯ್ಯ ಪಾರ್ಕ್ ಬಳಿ ಮಹಿಳೆಯೊಂದಿಗೆ ಮಗು ಇರುವುದು ಪತ್ತೆಯಾಗಿದೆ. ಬಳಿಕ ಮಗುವನ್ನು ರಕ್ಷಿಸಿ, ಪೋಷಕರ ಮಡಿಲು ಸೇರಿದ್ದಾರೆ.
ಇನ್ನು ಸುಮಾ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣ ದಾಖಲಾಗದೆ ಇರುವುದು ಹಾಗೂ ಆಕೆ ಮಾನಸಿಕ ಅಸ್ವಸ್ಥಳಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಕಯನ್ನೂ ಆಕಯ ಕುಟಂಬಸ್ಥರೊಂದಿಗೆ ಕಳುಹಿಸಿದ್ದಾರೆ.
ಮಗು ವಾಸವಿದ್ದ ಪ್ರದೇಶದಲ್ಲಿ ಸುಮಾ ಸಹೋದರ ಕೂಡ ವಾಸವಿದ್ದು, ಆತನನ್ನು ಭೇಟಿ ಮಾಡಲು ನಗರಕ್ಕೆ ಬಂದಿದ್ದಳು ಎಂದು ತಿಳಿದುಬಂದಿದೆ. ಮಗುವನ್ನು ಕರೆದುಕೊಂಡು ಹೋಗುವ ಮುನ್ನ 10 ನಿಮಿಷಕ್ಕೂ ಹೆಚ್ಚು ಕಾಲ ಸುಮಾ ಆಟವಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement