ಬೆಂಗಳೂರು: ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ಚಾಲಕ ಲಾರಿ ಚಾಲನೆ ಮಾಡಿದ ಪರಿಣಾಮ ವ್ಯಕ್ತಿ ಸ್ಥಳದಲ್ಲs ಸಾವನ್ನಪ್ಪಿದ ಘಟನೆ ತುಮಕೂರು ರಸ್ತೆಯ ಪಾರ್ಲೆ ಜಿ ಫ್ಯಾಕ್ಟರಿ ಸಮೀಪದ ಟೋಲ್ ಬಳಿ ಶುಕ್ರವಾರ ನಡೆದಿದೆ.
ಲಗ್ಗೆರೆ ನಿವಾಸಿ ಬಸವರಾಜ(37) ಮೃತ ದುರ್ದೈವಿ. ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಬಸವರಾಜ ಕೂಲಿ ಕಾರ್ಮಿಕನಾಗಿದ್ದು, ಲಗ್ಗೆರೆಯಲ್ಲಿ ನೆಲೆಸಿದ್ದರು. ಮುಂಜಾನೆ ಮಳೆ ಬರುತ್ತಿದ್ದ ಕಾರಣ ಟೋಲ್ ಬಳಿ ನಿಂತಿದ್ದ ಸರಕು ಸಾಗಣೆ ಲಾರಿಯೊಂದರ ಕೆಳಗೆ ಹೋಗಿ ನಿದ್ದೆಗೆ ಜಾರಿದ್ದಾರೆ.
ಈ ನಡುವೆ ಲಾರಿ ಚಾಲಕ ಟೀ ಕುಡಿದು ಬಂದ ಬಳಿಕ ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೇ ಲಾರಿಯನ್ನು ಏಕಾಏಕಿ ಚಾಲನೆ ಮಾಡಿಕೊಂಡು ತೆರಳಿದ್ದಾರೆ. ಈ ವೇಳೆ ಚಕ್ರಗಳು ಹರಿದು ಬಸವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ಪೀಣ್ಯ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಚಾಲನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಬಸ್ ಡಿಕ್ಕಿ: ಮಹಿಳೆ ಸಾವು
ಮತ್ತೊಂದು ಘಟನೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರ ಮೇಲೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಚ್‌ಇಎಲ್ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋ 5ರ ಬಳಿ ನಡೆದಿದೆ.
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಕಡೆಯಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ಖಾಸಗಿ ಬಸ್‌ವೊಂದು ಸಂಚರಿಸುತ್ತಿತ್ತು. ಬಿಎಚ್‌ಇಎಲ್ ಬಳಿಯ ಕೆಎಸ್‌ಆರ್‌ಟಿಸಿ ಘಟಕ 5ರ ಬಳಿ ಮಹಿಳೆ ನಿಂತಿದ್ದರು. ವೇಗವಾಗಿ ಬಂದ ಬಸ್, ಮಹಿಳೆಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಹಿಳೆ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಎರಡೂ ಕಾಲುಗಳ ಮೇಲೆ ಬಸ್ಸಿನ ಚಕ್ರಗಳು ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಮಹಿಳೆಯನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
Advertisement