ಬೆಂಗಳೂರು: ರಾಜ್ಯದಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ಈ ನಡುವಲ್ಲೇ ಮೂರ್ತಿ ವಿಸರ್ಜನೆಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ ಸಂಚಾರಿ ವಾಹನ (ಮೊಬೈಲ್ ಟ್ಯಾಂಕ್) ಹಾಗೂ ಕಲ್ಯಾಣಿಗಳಲ್ಲಿ ವ್ಯವಸ್ಥೆ ಮಾಡಿದೆ.
ಕಳೆದ ವರ್ಷ ಯಡಿಯೂರು ಕೆರೆಯಲ್ಲಿ 1.75 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗಿತ್ತು. ಈ ವರ್ಷ ಕೂಡ ಹೆಚ್ಚಿನ ಮೂರ್ತಿಗಳು ವಿಸರ್ಜನೆಯಾಗುವ ನಿರೀಕ್ಷೆಗಳಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಹದೇಪುರ ವಲಯದಲ್ಲಿ 14 ಕಲ್ಯಾಣಿಗಳು, ಯಲಹಂಕದಲ್ಲಿ 10, ಆರ್.ಆರ್. ನಗರದಲ್ಲಿ ಏಳು, ಬೊಮ್ಮನಹಳ್ಳಿಯಲ್ಲಿ ಐದು, ದಕ್ಷಿಣದಲ್ಲಿ ಎರಡು, ಪೂರ್ವ, ಪಶ್ಚಿಮ ಹಾಗೂ ದಾಸರಹಳ್ಳಿ ವಲಯದಲ್ಲಿ ತಲಾ ಒಂದು ಕಲ್ಯಾಣಿಗಳನ್ನು ಮೂರ್ತಿ ವಿಸರ್ಜನೆಗೆ ಸಜ್ಜುಗೊಳಿಸಲಾಗಿದೆ. ಎಂಟು ವಲಯಗಳಲ್ಲಿ 462 ಮೊಬೈಲ್ ಟ್ಯಾಂಕ್‌ಗಳನ್ನು ಸಿದ್ಧಮಾಡಲಾಗಿದ್ದು, ಪೂರ್ವದಲ್ಲಿ ಅತಿ ಹೆಚ್ಚು 138 ಮೊಬೈಲ್ ಟ್ಯಾಂಕರ್‌ಗಳು ಸಂಚರಿಸಲಿವೆ.
ದಕ್ಷಿಣ ವಲಯದ ಪದ್ಮನಾಭನಗರ ವ್ಯಾಪ್ತಿಯಲ್ಲಿರುವ ಯಡಿಯೂರು ಕೆರೆಯಲ್ಲಿರುವ ಕಲ್ಯಾಣಿಗೆ ಶುಕ್ರವಾರ ನೀರು ತುಂಬಿಸಲಾಯಿದ್ದು, ಶನಿವಾರದಿಂದ (ಸೆಪ್ಟೆಂಬರ್ 7) ಸೆ. 17ರವರೆಗೆ ಮೂರ್ತಿ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದೆ.
ಮೊದಲ ಮೂರು ದಿನ ಹೆಚ್ಚು ಮೂರ್ತಿಗಳು ವಿಸರ್ಜನೆಯಾಗುವುದರಿಂದ, ಕಲ್ಯಾಣಿ ಬಹುತೇಕ ಭರ್ತಿಯಾಗಲಿದೆ. ಆದ್ದರಿಂದ ಸೆ.10ರಂದು ಶುಚಿಗೊಳಿಸುವ ಕೆಲಸ ಮಾಡಲಾಗುತ್ತದೆ. ಅಂದು ವಿಸರ್ಜನೆಗೆ ಅವಕಾಶ ಇರುವುದಿಲ್ಲ. ಸೆ.18ರಿಂದ ಯಡಿಯೂರು ಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ. 2023ರಲ್ಲಿ 11 ದಿನಗಳಲ್ಲಿ 1.75 ಲಕ್ಷ ಮೂರ್ತಿಗಳನ್ನು ಈ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗಿತ್ತು ಎಂದು ಪದ್ಮನಾಭನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಯಡಿಯೂರು ಕೆರೆ, ಕಲ್ಯಾಣಿಯಲ್ಲಿ ಮಣ್ಣಿನ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶವಿದೆ. ಪಿಒಪಿ ಮೂರ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಸಿದ್ಧಗೊಳಿಸಿರುವ ಕಲ್ಯಾಣಿಗಳು ಹಾಗೂ ಮೊಬೈಲ್ ಟ್ಯಾಂಕರ್‌ಗಳ ಮಾಹಿತಿಯನ್ನು ವೆಬ್‌ಸೈಟ್ https://apps.bbmpgov.in/ganesh2024/ ನಲ್ಲಿ ಪಡೆದುಕೊಳ್ಳಬಹುದಾಗಿದೆ.
Advertisement