ಡ್ರಗ್ಸ್ ಸೇವನೆ, ಮಾರಾಟ ಮಾಡಿದ್ರೆ 10 ವರ್ಷ ಜೈಲು‌ ಶಿಕ್ಷೆ; One Nation One Election ಇದೊಂದು ಐತಿಹಾಸಿಕ ಹೆಜ್ಜೆ; ಗಣೇಶಮೂರ್ತಿ ವಿಸರ್ಜನೆ ವೇಳೆ ಚೂರಿ ಇರಿತ; ಮೂವರ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 18-09-24

ಡ್ರಗ್ಸ್ ಸೇವನೆ, ಮಾರಾಟ ಮಾಡಿದ್ರೆ 10 ವರ್ಷ ಜೈಲು‌ ಶಿಕ್ಷೆ; One Nation One Election ಇದೊಂದು ಐತಿಹಾಸಿಕ ಹೆಜ್ಜೆ; ಗಣೇಶಮೂರ್ತಿ ವಿಸರ್ಜನೆ ವೇಳೆ ಚೂರಿ ಇರಿತ; ಮೂವರ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 18-09-24

1. ಡ್ರಗ್ಸ್ ಹಾವಳಿ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚನೆ!

ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಶೇಕಡಾ 50ರಷ್ಟು ಪ್ರಕರಣಗಳು ಬೆಂಗಳೂರು ನಗರದಲ್ಲೇ ದಾಖಲಾಗುತ್ತಿವೆ. ಮಂಗಳೂರಿನಲ್ಲಿ ಶೇ.22ರಷ್ಟು, ಬೇರೆ ಬೇರೆ ಜಿಲ್ಲೆಗಳಲ್ಲಿ‌ ಶೇ 11 ರಷ್ಟು ಕೇಸ್ಗಳಿವೆ. ಹೀಗಾಗಿ ಡ್ರಗ್ಸ್ ಹಾವಳಿ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಿದ್ದೇವೆ. ಗೃಹ ಸಚಿವರು, ಆರೋಗ್ಯ, ವೈದ್ಯಕೀಯ, ನಗರಾಭಿವೃದ್ಧಿ, ಐಟಿಬಿಟಿ ಇಲಾಖೆ ಸಚಿವರುಗಳು‌ ಈ ಟಾಸ್ಕ್ ಫೋರ್ಸ್ನ ಸದಸ್ಯರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ಸಿಎಂ, ಡ್ರಗ್ಸ್ ತಡೆಗಟ್ಟಲು ಕಾನೂನಿನಲ್ಲಿ ತಿದ್ದುಪಡಿ ಅಥವಾ ಹೊಸ ಕಾನೂನು ಮಾಡುತ್ತೇವೆ. ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಗಾದರೆ ಜಾಮೀನು ಸಿಗದಂತೆ ಮಾಡುತ್ತೇವೆ. ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡುವವರಿಗೆ ಕನಿಷ್ಠ 10 ವರ್ಷ ಜೈಲು‌ ಶಿಕ್ಷೆ ಆಗಲಿದೆ ಎಂದರು. ಇದೇ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಮೆಡಿಕಲ್ ಸ್ಟೋರ್ಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಸಿಗುತ್ತಿರುವ ಆತಂಕ ಮೂಡಿಸಿದೆ. ಮೆಡಿಕಲ್ ಸ್ಟೋರ್ಗಳಲ್ಲಿ ಡ್ರಗ್ಸ್ ದಂಧೆಗೆ ಯಾವ ರೀತಿ ಕಡಿವಾಣ ಹಾಕಬೇಕು ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದರು.

2. ಒಂದು ದೇಶ ಒಂದು ಚುನಾವಣೆ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

NDA ಸರ್ಕಾರದ ಮಹತ್ವಕಾಂಕ್ಷೀಯ ಒಂದು ದೇಶ ಒಂದು ಚುನಾವಣೆ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದಾಗಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಪ್ರಸ್ತಾವನೆಗೆ ಇದೀಗ ಅನುಮೋದನೆ ಸಿಕ್ಕಿದ್ದು ಇದಕ್ಕೆ ಹಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದು ಸರ್ಕಾರದ ಹಣವನ್ನು ಉಳಿಸುವ ಉದ್ದೇಶ ಎಂದು ಕೇಂದ್ರ ಹೇಳುತ್ತಿದೆ. ಆದರೆ ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿ ಈ ರೀತಿ ಯತ್ನಿಸುತ್ತಿದೆ ಎಂದು ಆರೋಪಿಸಿದರು. ಈ ನಿರ್ಧಾರವು ಭಾರತದ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಎಂದು JDS ನಾಯಕ, ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿದ್ದಾರೆ.

3. ಬೆಂಗಳೂರು ಬಾಹ್ಯಾಕಾಶ ಎಕ್ಸ್‌ ಪೋ 2024 ಉದ್ಘಾಟನೆ

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಬೆಂಗಳೂರು ಬಾಹ್ಯಾಕಾಶ ಎಕ್ಸ್‌ ಪೋ 2024 ಅನ್ನು ಐಟಿ, ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕರ್ನಾಟಕದ ಬಾಹ್ಯಾಕಾಶ ಶಕ್ತಿ ಕೇಂದ್ರ ಎಂಬ ಖ್ಯಾತಿಯನ್ನು ಇನ್ನೂ ಬಲಪಡಿಸಿಕೊಳ್ಳಲಿದೆ. ಇದನ್ನು ಸಾಧಿಸಲು ರಾಜ್ಯದ ಸರ್ಕಾರಿ ನೀತಿಗಳು, MSME ಬೆಂಬಲ ಮತ್ತು ಮೂಲಸೌಕರ್ಯ ಅಭಿವೃದ್ಧಿಯು ದೃಢವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪಾಲನ್ನು ಹೊಂದುವ ಮೂಲಕ 17 ಶತಕೋಟಿ ಅಮೆರಿಕನ್ ಡಾಲರ್ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

4. ಗಣೇಶ ಮೂರ್ತಿ ವಿಸರ್ಜನೆ ವೇಳೆ ಚೂರಿ ಇರಿತ: ಮೂವರ ಬಂಧನ

ಬೆಳಗಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚೂರಿ ಇರಿತದ ಘಟನೆ ನಂತರ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ಮೆರವಣಿಗೆ ಮುಗಿದ ನಂತರ ವಾಪಸ್ಸಾಗುತ್ತಿದ್ದ ಸಂತ್ರಸ್ತರನ್ನು ಬೈಕ್ ನಲ್ಲಿ ಬೆನ್ನಟ್ಟಿದ್ದ ಆರೋಪಿಗಳು ರಾಣಿ ಚೆನ್ನಮ್ಮ ವೃತ್ತದಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಬಂಧಿತರನ್ನು ಕುರಿ, ಮಹೇಶ ಮತ್ತು ವಿಜಯ ಎಂದು ಗುರುತಿಸಲಾಗಿದೆ. ಮತ್ತೊಂದೆಡೆ ವಿಜಯಪುರದ ಸಿಂದಗಿಯಲ್ಲಿ ಗಣೇಶ ವಿಸರ್ಜನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಈ ಸಂಬಂಧ ಆರೋಪಿಗಳಾದ ಪ್ರಶಾಂತ ಬಿರಾದಾರ ಹಾಗೂ ಮುದಕಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

5. ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್

ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ಆದೇಶವನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ನಾಳೆಗೆ ಕಾಯ್ದಿರಿಸಿದೆ. ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಶಾಸಕರ ಕಚೇರಿಯಲ್ಲಿ ಘಟನೆಯಾಗಿರುವುದರಿಂದ ಜಾಮೀನು ನೀಡಬಾರದು ಎಂದು ದೂರುದಾರ ವೇಲು ನಾಯ್ಕರ್ ಪರ ಸೂರ್ಯ ಮುಕುಂದರಾಜ್ ವಾದ ಮಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com