ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೈದಾನದ ಕಬ್ಬಿಣದ ಗೇಟ್ ಕಳಚಿ ಬಿದ್ದು 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆಗೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಆದರೆ, ಆಟದ ಮೈದಾನದ ಗೇಟ್ ಕುಸಿದು ಬಿದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಕುಸಿದುಬಿದ್ದಿತ್ತು ಎಂದು ಹೇಳಲಾಗುತ್ತಿದೆ.
ಗೇಟ್ ಹಾಗೂ ಕಂಬ ತುಕ್ಕು ಹಿಡಿದಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ದುರಸ್ತಿ ಮಾಡಿರಲಿಲ್ಲ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
10 ವರ್ಷಗಳಿಂದ ಕನಿಷ್ಟ 4 ಬಾರಿಯಾದರೂ ಗೇಟ್ ಕಳಚಿ ಬಿದ್ದಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿರಕಲಿಲ್ಲ. ಮೈದಾನದಲ್ಲಿ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇದು ಪಾಲಿಕೆಯ ಕಾರ್ಯದ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಮೂಡಿಸುತ್ತದೆ. ಉದ್ಯಾನವನಕ್ಕೆ ಮಕ್ಕಳನ್ನು ಆಟವಾಡಲು ಕಳುಹಿಸಲು ಬಯಸುತ್ತೇವೆಯೇ ವಿನಃ ಸಾಯುವ ಸಲುವಾಗಿ ಅಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ನಗರದಲ್ಲಿ ಉದ್ಯಾನವನಗಳ ಸಂಖ್ಯೆ ಕಡಿಮೆಯಿದ್ದು, ಹಲವು ಸಮಸ್ಯೆಗಳಿವೆ. ಮೈದಾನದಲ್ಲಿ ಹಾಕಲಾಗಿರುವ ಜೋಕಾಲಿ ತುಕ್ಕು ಹಿಡಿದಿದ್ದು, ಎಲೆಕ್ಟ್ರಿಕ್ ವೈಯರ್ ಗಳು ಕೆಳಗೆ ಬಿದ್ದು, ಅಪಾಯವನ್ನುಂಟು ಮಾಡುತ್ತಿವೆ. ಅಧಿಕಾರಿಗಳು ಆಗಾಗ್ಗೆ ಪರಿಶೀಲನೆ ನಡೆಸಬೇಕಿದ್ದು, ನಿರ್ವಹಣೆ ಮಾಡಬೇಕು. ದುರ್ಘಟನೆ ಸಂಭವಿಸುವುದಕ್ಕೂ ಮುನ್ನು ಪಾಲಿಕೆ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಅವರು ಹೇಳಿದ್ದಾರೆ.
ಬೆಂಗಳೂರು ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ ಜಿ ನಾಗಸಿಂಹ ರಾವ್ ಮಾತನಾಡಿ, ನಾಗರಿಕ ಸಂಸ್ಥೆ ಮಕ್ಕಳ ಸುರಕ್ಷತೆಯನ್ನು ನಿರ್ಲಕ್ಷಿಸಿ ಹಲವಾರು ಸಾವುಗಳಿಗೆ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.
ಮಕ್ಕಳ ಹಕ್ಕುಗಳ ವಿಶ್ವಸಂಸ್ಥೆಯ ಕನ್ವೆನ್ಷನ್ (UNCRC) ಪ್ರಕಾರ, ಉದ್ಯಾನವನಗಳು ಮತ್ತು ಆಟದ ಮೈದಾನಗಳು ಮಕ್ಕಳ ಸ್ನೇಹಿ ಆಗಿರಬೇಕು. ಉಯ್ಯಾಲೆ, ಬೆಂಚುಗಳು, ಕುಡಿಯುವ ನೀರಿನ ಸೌಲಭ್ಯಗಳು ಮತ್ತು ಶೌಚಾಲಯಗಳು ಸುರಕ್ಷಿತ ಹಾಗೂ ಮಕ್ಕಳ ಸ್ನೇಹಿಯಾಗಿರಬೇಕು. ಇವುಗಳ ಬಳಸುವವರಿಗೆ ಅಪಾಯ ತಂದೊಡ್ಡಬಾರದು.
ಆಟದ ಮೈದಾನಗಳು ಮತ್ತು ಸಲಕರಣೆಗಳನ್ನು ಪಾಲಿಕೆ ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ನಿರ್ವಹಿಸಬೇಕು. ನಗರದ ಪ್ರತಿ ವಾರ್ಡ್‌ಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಮಿತಿಗಳು ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ಪರಿಶೀಲಿಸುವ, ಪೋಷಕರು ಮತ್ತು ಸಾರ್ವಜನಿಕರಿಂದ ದೂರುಗಳನ್ನು ಪರಿಹರಿಸುವ ಕಾರ್ಯವನ್ನು ಮಾಡಬೇಕು. ಇದೀಗ ಬಾಲಕ ಸಾವನ್ನಪ್ಪಿದ ಮಲ್ಲೇಶ್ವರಂ ಉದ್ಯಾನವನದ ಬಗ್ಗೆಯೂ ನಿವಾಸಿಗಳು ಹಲವಾರು ದೂರುಗಳನ್ನು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ ಭಾನುವಾರದ ದುರಂತವನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.
ನಾಗರಿಕ ಕಾರ್ಯಕರ್ತ ಸಂದೀಪ್ ಅನಿರುಧನ್ ಅವರು ಮಾತನಾಡಿ, ಸಾರ್ವಜನಿಕ ಆಸ್ತಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ, ಸರಿಯಾಗಿ ನಿರ್ವಹಿಸುವುದಿಲ್ಲ. ಹೀಗಾಗಿ ಇವುಗಳಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ನಮ್ಮಲ್ಲಿ ಸಮಿತಿಗಳ ಅಗತ್ಯವಿದೆ. ಈ ರೀತಿಯಾಗಿ ಅವುಗಳನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ಮೇಲ್ವಿಚಾರಣೆ ಮಾಡಬಹುದು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಈ ನಡುವೆ ಘಟನೆ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮೈದಾನಕ್ಕೆ ಭೇಟಿ ನೀಡಿ, ಮೃತ ಬಾಲಕನ ಪೋಷಕರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಸಂಬಂಧ ವರದಿಯನ್ನು ಕೇಳಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್ ಶಶಿಕುಮಾರ್ ಅವರು ಮಾತನಾಡಿ, ದತ್ತಾತ್ರೇಯ ದೇವಸ್ಥಾನದ ವಾರ್ಡ್‌ನಲ್ಲಿ (ವಾರ್ಡ್ ಸಂಖ್ಯೆ 77) ಘಟನೆ ನಡೆದಿದೆ. ಗೇಟ್ ಕುಸಿತಕ್ಕೆ ಕಾರಣ ಪತ್ತೆ ಮಾಡಲಾಗುತ್ತಿದ್ದು, ವಿಸ್ತೃತ ವರದಿ ಸಿದ್ಧಪಡಿಸುವಂತೆ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಲಾಗಿದೆ. ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement