ಕೋವಿಡ್ ವಿರುದ್ಧ ನಿರಂತರ ಹೋರಾಟ: ರೂಪಾಂತರಿ ವೈರಸ್'ಗಳಿಗೂ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಿದ IISC

ಭಾರತದಲ್ಲಿ ಮಹಾಮಾರಿ ಕೋವಿಡ್ ವೈರಸ್ ನಿಧಾನಗತಿಯಲ್ಲಿ ತಲೆಎತ್ತುತ್ತಿದ್ದು, ಈ ನಡುವಲ್ಲೇ ಕೋವಿಡ್ ವಿರುದ್ಧ ದಿಟ್ಟ ಹೋರಾಟ ನಡೆಸುವ ಸಲುವಾಗಿ ಶೈತ್ಯಾಗಾರದ ಅಗತ್ಯವಿಲ್ಲದೆ, ಸಹಜ ವಾತಾವರಣದಲ್ಲೂ ಶೇಖರಿಸಿಡಬಹುದಾದ, ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ವಿಜ್ಞಾನಿ ಗಳು ಸಂಶೋಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಭಾರತದಲ್ಲಿ ಮಹಾಮಾರಿ ಕೋವಿಡ್ ವೈರಸ್ ನಿಧಾನಗತಿಯಲ್ಲಿ ತಲೆಎತ್ತುತ್ತಿದ್ದು, ಈ ನಡುವಲ್ಲೇ ಕೋವಿಡ್ ವಿರುದ್ಧ ದಿಟ್ಟ ಹೋರಾಟ ನಡೆಸುವ ಸಲುವಾಗಿ ಶೈತ್ಯಾಗಾರದ ಅಗತ್ಯವಿಲ್ಲದೆ, ಸಹಜ ವಾತಾವರಣದಲ್ಲೂ ಶೇಖರಿಸಿಡಬಹುದಾದ, ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ವಿಜ್ಞಾನಿ ಗಳು ಸಂಶೋಧಿಸಿದ್ದಾರೆ.

ಐಐಎಸ್'ಸಿಯ ಆಣ್ವಿಕ ಜೈವಿಕಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ರಾಘವನ್ ವರದರಾಜನ್ ಅವರ ನೇತೃತ್ವದ ತಂಡ ಈ ಪ್ರತಿಜನಕವನ್ನು ಅಭಿವೃದ್ಧಿಪಡಿಸಿದ್ದು, ಇದು ಕೋವಿಡ್ ಮಾತ್ರವಲ್ಲದೇ ಸಾರ್ಸ್‌–ಕೋವಿ–2 ಹಾಗೂ ಸದ್ಯ ಇರುವ ಇತರ ಯಾವುದೇ ರೂಪಾಂತರ ವೈರಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ಎನ್‌ಪಿಜೆ ವ್ಯಾಕ್ಸಿನ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಈ ಅಂಶವನ್ನು ಹೇಳಲಾಗಿದೆ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಯು ಸಾರ್ಸ್‌ ಕೋವಿ–2 ವಿರುದ್ಧ ಹೋರಾಡುವ ಉತ್ತಮ ಫಲಿತಾಂಶ ಹೊಂದಿದೆ. ಆದರೆ, ವೈರಾಣುವಿನ ರೂಪಾಂತರ ತ್ವರಿತಗತಿಯಲ್ಲಿ ಆಗುತ್ತಿರುವುದರಿಂದ ಅದರ ಪ್ರತಿಕಾಯ ಸಾಮರ್ಥ್ಯ ಸಾಕಾಗುವುದಿಲ್ಲ. ಇದೇ ನಿಟ್ಟಿನಲ್ಲಿ ನಡೆಸಿದ ಸಂಶೋಧನೆ ಉತ್ತಮ ಫಲಿತಾಂಶ ನೀಡಿದೆ ಎಂದೆನ್ನಲಾಗಿದೆ.

ಲಭ್ಯವಿರುವ ಲಸಿಕೆಗಳು ಸಾರ್ಸ್- ಸಿಒವಿ-2 (ಕೋವಿಡ್-19) ವೈರಸ್ ವಿರುದ್ಧ ಮಾತ್ರವೇ ಪರಿಣಾಮಕಾರಿಯಾಗಿವೆ. ಜತೆಗೆ, ಈ ವೈರಸ್ ರೂಪಾಂತರ ಹೊಂದಿದಂತೆಲ್ಲ ಇವುಗಳ ಕಾರ್ಯ ದಕ್ಷತೆಯೂ ಕಡಿಮೆಯಾಗುತ್ತದೆ. ವಿವಿಧ ವೈರಸ್​ಗಳಲ್ಲಿ ಕಂಡುಬಂದ ಪ್ರೊಟೀನ್​ಗಳನ್ನು ಅಧ್ಯಯನ ಮಾಡಿದ ಬಳಿಕ ವಿಜ್ಞಾನಿಗಳು ಕೋವಿಡ್-19ನ ಎರಡು ಪ್ರೊಟೀನ್​ಗಳನ್ನು ಆಯ್ಕೆ ಮಾಡಿಕೊಂಡರು. ಎಸ್-2 ಸಬ್​ನಿಟ್ ಹಾಗೂ ರಿಸೆಪ್ಟರ್ ಬೈಂಡಿಂಗ್ ಡೋಮೇನ್ (ಆರ್​ಬಿಡಿ) ಎಂದು ಕರೆಯಲಾಗುವ ಪ್ರೊಟೀನ್ ಬಳಸಿ ಲಸಿಕೆ ಸಿದ್ಧಪಡಿಸಿದ್ದಾರೆ. ಎಸ್2 ಘಟಕವು ಎಸ್-1 ಘಟಕಕ್ಕಿಂತ ಕಡಿಮೆ ರೂಪಾಂತರಿಯಾಗಿದ್ದು, ಸದ್ಯದ ಎಲ್ಲ ಲಸಿಕೆಗಳು ಇದನ್ನೇ ಗುರಿಯಾಗಿಸಿಕೊಂಡಿವೆ. ಜತೆಗೆ, ಆರ್​ಬಿಡಿ ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದರು. ಈ ಕಾರಣದಿಂದಾಗಿ ಇವೆರಡು ಅಂಶಗಳನ್ನು ಒಳಗೊಂಡ ಆರ್​ಎಸ್2 ಎಂಬ ಹೈಬ್ರಿಡ್ ಪ್ರೊಟೀನ್ ಸಿದ್ಧಪಡಿಸಿದ್ದಾರೆ.

ಆರಂಭದಲ್ಲಿ ಇವುಗಳನ್ನು ಸಸ್ತನಿಗಳ ಜೀವಕೋಶದ ಮೇಲೆ ಪ್ರಯೋಗಿಸಲಾಯಿತು. ಈ ಹೈಬ್ರಿಡ್ ಪ್ರೊಟೀನ್ ಹೆಚ್ಚಿನ ಪ್ರತಿಸ್ಪಂದನೆ ತೋರಿತು. ಪ್ರಯೋಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಆರಂಭದಲ್ಲಿ ಭಾವಿಸಿದ್ದಾಗಿ ಐಐಎಸ್​ಸಿಯ ಸಂಶೋಧನಾರ್ಥಿ ನಿಧಿ ಮಿತ್ತಲ್ ಹೇಳಿದ್ದು, ಈ ಪ್ರೊಟೀನ್​ನನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬಹುದು ಎಂಬುದು ಇದರಿಂದ ಗೊತ್ತಾಯಿತು ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವರದರಾಜನ್, ‘ಕೋವಿಡ್ ಭಾರತದಲ್ಲಿ ಪ್ರಬಲವಾಗುವ ಮೊದಲೇ ಈ ಲಸಿಕೆಯ ಅಭಿವೃದ್ಧಿ ಕುರಿತು ನಮ್ಮ ತಂಡವು ಸಂಶೋಧನೆ ಆರಂಭಿಸಿತ್ತು. ಆಗ ನಮಗೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನವು ಆರ್ಥಿಕ ನೆರವು ನೀಡುತ್ತಿತ್ತು’ ಎಂದು ಹೇಳಿದ್ದಾರೆ.

ಈ ಸಂಶೋಧಕರ ತಂಡವು 2000ನೇ ಇಸವಿಯಿಂದ ವೈರಾಣುಗಳಿಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಏಡ್ಸ್‌ ಹಾಗೂ ಇನ್‌ಫ್ಲುಯೆನ್ಜಾ ವಿರುದ್ಧ ಪ್ರತಿಜನಕವನ್ನು ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಮಿನ್‌ವ್ಯಾಕ್ಸ್ ಎಂಬ ಸ್ಟಾರ್ಟ್‌ಅಪ್ ಜತೆಗೂಡಿ ಈ ಪ್ರತಿಜನಕವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಸಂಪೂರ್ಣ ಸಂಶೋಧನೆ IIScಯಲ್ಲೇ ಆಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಹೊಸ ಲಸಿಕೆಯ ವಿಶೇಷ ಗುಣವೆಂದರೆ ಇದನ್ನು ಸಾಮಾನ್ಯ ಕೊಠಡಿಯ ವಾತಾವರಣದಲ್ಲಿ ಒಂದು ತಿಂಗಳ ಕಾಲ ಶೇಖರಿಸಿ ಇಡಬಹುದು. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಗಳಿಗೆ ಶೈತ್ಯಾಗಾರದ ವ್ಯವಸ್ಥೆ ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ ಈ ಲಸಿಕೆಗಳ ಸಾಗಾಟ ಹಾಗೂ ದಾಸ್ತಾನು ಅತ್ಯಂತ ಮಿತವ್ಯಯಕಾರಿಯಾಗಿರಲಿದೆ. ಐಐಎಸ್​ಸಿ ವಿಜ್ಞಾನಿಗಳ ತಂಡವು ಏಡ್ಸ್ ಹಾಗೂ ಇನ್​ಫ್ಲುಯೆಂಜಾ ಕಾಯಿಲೆಗೂ ಲಸಿಕೆ ತಯಾರಿಯಲ್ಲೂ ತೊಡಗಿಕೊಂಡಿದೆ. ಈ ಅನುಭವವನ್ನೇ ಹೊಸ ಲಸಿಕೆ ತಯಾರಿಯಲ್ಲೂ ಬಳಸಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com