ರಸ್ತೆ ದಾಟುವಾಗ ಟಿಪ್ಪರ್ ಲಾರಿ ಡಿಕ್ಕಿ: ಪೌರಕಾರ್ಮಿಕ ಮಹಿಳೆ ದಾರುಣ ಸಾವು

ಸರೋಜಾ ಅವರ ನೌಕರಿ ಖಾಯಂ ಆಗಿದ್ದು, ಮೇ,1ರಂದು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೇವಾ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದರು.
ಮೃತ ಮಹಿಳೆ ಸರೋಜಾ
ಮೃತ ಮಹಿಳೆ ಸರೋಜಾ
Updated on

ಬೆಂಗಳೂರು: ರಸ್ತೆ ದಾಟುವಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಿಬಿಎಂಪಿ ಪೌರಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಶ್ರೀರಾಮಪುರದ ಅರುಂಧತಿನಗರ ನಿವಾಸಿ ಸರೋಜಾ (48) ಮೃತ ದುರ್ದೈವಿ. ಮಂಗಳವಾರ ಬೆಳಗ್ಗೆ ಸುಮಾರು 6.30ಕ್ಕೆ ರಾಜಾಜಿನಗ ರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರ ಮೇಲ್ಸೇತುವೆ ಬಳಿ ದೋಬಿಘಾಟ್ ಜಂಕ್ಷನ್ ಸಿಗ್ನಲ್‌ನಲ್ಲಿ ಈ ದುರ್ಘಟನೆ ನಡೆದಿದೆ.

ಘಟನೆ ಬಳಿಕ ಟಿಪ್ಪರ್ ಲಾರಿ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಟಿಪ್ಪರ್ ವಾಹನ ಜಪ್ತಿ ಮಾಡಿದ್ದು, ಚಾಲಕ ಬಂಧನಕ್ಕೆ ಬಲೆ ಬೀಸಲಾಗಿದೆ.

ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸರೋಜಾ, ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬಯೋಮೆಟ್ರಿಕ್‌ ಹಾಜರಾತಿ ನೀಡಲು ವಾರ್ಡ್‌ ಕಚೇರಿಗೆ ತೆರಳಲು ಬಸವೇಶ್ವರನಗರ ತಿಮ್ಮಯ್ಯ ರಸ್ತೆ ಕಡೆಯಿಂದ ವಾರಿಯರ್‌ ಬೇಕರಿ ಕಡೆಗೆ ರಸ್ತೆ ದಾಟುತ್ತಿದ್ದರು.

ಇದೇ ವೇಳೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಎಸ್‌ ಪಿಎಸ್ ಸ್ಕೂಲ್ ಕಡೆಯಿಂದ ರಾಜಾಜಿನಗರದ ಕಡೆಗೆ ಹೋಗಲು ದೋಬಿಘಾಟ್‌ನಸಿಗ್ನಲ್‌ನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ರಸ್ತೆ ದಾಟುತ್ತಿದ್ದ ಸರೋಜಾ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯರಭಸಕ್ಕೆ ರಸ್ತೆಗೆ ಬಿದ್ದ ಸರೋಜಾ ತಲೆ ಮೇಲೆಯೇ ಆ ಟಿಪ್ಪರ್‌ನ ಮುಂದಿನ ಚಕ್ರ ಹರಿದಿದೆ, ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

image-fallback
ಪ್ರತ್ಯೇಕ ಅಪಘಾತ; ಬಿಬಿಎಂಪಿ ನೌಕರ ಸೇರಿ ಇಬ್ಬರ ಸಾವು

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಸರೋಜಾ ಅವರ ನೌಕರಿ ಖಾಯಂ ಆಗಿದ್ದು, ಮೇ,1ರಂದು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೇವಾ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದರು. ಅಷ್ಟರಲ್ಲೇ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಪೌರಕಾರ್ಮಿಕ ಮೇಲ್ವಿಚಾರಕ ಮಹೇಶ್ ಅವರು ಮಾತನಾಡಿ, ಮೃತ ಸರೋಜಾ ಬಿಬಿಎಂಪಿ ನೌಕರರಾಗಿದ್ದು, 2 ದಶಕಗಳಿಂದ ಸೇವೆ ಸಲ್ಲಿಸಿದ್ದರು. ಇದೀಗ ಅವರಿಲ್ಲ. ಅವರ ಮಕ್ಕಳಿಗೆ ಸೂಕ್ತ ಪರಿಹಾರ ನೀಡಬೇಕು. ಒಬ್ಬ ಮಗನಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೃತರ ಸರೋಜಾ ಅವರ ಪುತ್ರಿ ಗೌರಿ ಅವರು ಮಾತನಾಡಿ, ಸಂಜೆ 6.30ರ ಸುಮಾರಿಗೆ ವಿಷಯ ತಿಳಿಯಿತು. ನಮಗೆ ತಂದೆಯಿಲ್ಲ. ಅಣ್ಣನೊಂದಿಗೆ ತಾಯಿ ವಾಸವಿದ್ದರು. ನನಗೆ ವಿವಾಹವಾಗಿದ್ದು, ಪತಿಯೊಂದಿಗೆ ಬನಶಂಕರಿಯಲ್ಲಿ ವಾಸವಿದ್ದೇನೆ. ಅಪಘಾತದಲ್ಲಿ ತಾಯಿ ಮೃತಪಟ್ಟಿದ್ದು, ಬಿಬಿಎಂಪಿ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com