
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ತಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬಾಲಕ, ಬಸ್‌ನ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಹಲ್ಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಜೆಪಿ ರಸ್ತೆ ಬಳಿ ಭಾನುವಾರ ನಡೆದಿದೆ.
ಶಬರೀಶ್ (11) ಮೃತ ದುರ್ದೈವಿ. ಬಾಲಕ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಎಸ್‌ಜೆಪಿ ರಸ್ತೆಯ ಮಾರ್ಕೆಟ್ ರಸ್ತೆಯಿಂದ ಟೌನ್ ಹಾಲ್ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮ ಕೆಳಗೆ ಬಿದ್ದ ಬಾಲಕನ ಮೇಲೆ ಬಸ್‌ನ ಹಿಂಬದಿಯ ಚಕ್ರ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬಾಲಕನ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಲಸೂರು ಗೇಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ಬಂಧಿಸಿ ಬಸ್ ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ವಾರಗಳಲ್ಲಿ ಬಿಎಂಟಿಸಿ ಬಸ್‌ನಿಂದ ಸಂಭವಿಸಿದ ಐದನೇ ಅಪಘಾತ ಇದಾಗಿದೆ.
ಈ ನಡುವೆ ಮೃತ ಬಾಲಕನಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಶಬರೀಶ್ ಅವರ ಕುಟುಂಬ ಮತ್ತು ಇತರ ನಿವಾಸಿಗಳು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.
Advertisement