
ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಸರ್ಕಾರಿ ಇಲಾಖೆಗಳ ನೌಕರರಿಗೆ ಸೂಕ್ತ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಇದರಿಂದ ಯಾವುದೇ ತಪ್ಪಿಲ್ಲದಿದ್ದರೂ ಕರ್ನಾಟಕ ಸರ್ಕಾರದ ವಿಮಾ ಇಲಾಖೆಯಿಂದ (ಕೆಜಿಐಡಿ) ಸಾಲ ಪಡೆದವರು ಬಡ್ಡಿ ಪಾವತಿಸುವಂತಾಗಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಕೆಲವು ಜಿಲ್ಲೆಗಳ ಕೆಲವು ಇಲಾಖೆಗಳ ಸರ್ಕಾರಿ ನೌಕರರಿಗೆ ಸೂಕ್ತ ಸಮಯಕ್ಕೆ ವೇತನ ಸಿಗುತ್ತಿಲ್ಲ. ಕೆಲವರು ತಿಂಗಳುಗಳು, ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಸರ್ಕಾರದಿಂದ ಮಂಜೂರಾದ ಹುದ್ದೆಗಳು 7.7 ಲಕ್ಷವಾಗಿದ್ದು, ಅದರಲ್ಲಿ ಸುಮಾರು 5.4 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸಿಬ್ಬಂದಿ ಹಾಗೂ ಹಣ ಕೊರತೆಯಿಂದಾಗಿ ಸರ್ಕಾರವು ಗುತ್ತಿಗೆ ನೌಕರರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇವರಿಗೂ ಕೂಡ ವೇತನ ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ವೇತನ ವಿಳಂಬದಿಂದಾಗಿ ನೌಕರರು ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗಿದೆ ಎಂದು ತಿಳಿದುಬಂದಿದೆ.
ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯ ಸರ್ಕಾರವು 1 ಲಕ್ಷ ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡುತ್ತಿದೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ನಂತರ ವೇತನ ಮತ್ತು ಪಿಂಚಣಿ ಸೇರಿದಂತೆ ಕನಿಷ್ಠ 22,000 ಕೋಟಿ ರೂ.ಗಳಿಂದ 25,000 ಕೋಟಿ ರೂ ವೆಚ್ಚ ಮಾಡುತತಿದೆ. ಈ ವೆಚ್ಚ ನಿರ್ವಹಣೆಗೆ ಸರ್ಕಾರವು ಹೆಣಗಾಡುತ್ತಿದೆ. ವೇತನ ಪಾವತಿ ವಿಳಂಬಕ್ಕೆ ಇದು ಕೂಡ ಒಂದು ಕಾರಣವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಸರ್ಕಾರಿ ಸ್ವಾಮ್ಯ ಸಂಸ್ಥೆಯಾದ ಕೆಜಿಐಡಿ ಕಡಿಮೆ ಬಡ್ಡಿಯಲ್ಲಿ ಸರ್ಕಾರಿ ನೌಕರರಿಗೆ ಸಾಲ ನೀಡುತ್ತದೆ. ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ಸಾಲದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಆದರೆ, ಸಂಬಳ ವಿಳಂಬವಾದಾಗ ಹಲವರಿಗೆ ಸಕಾಲಕ್ಕೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ನಾನಾ ಕಾರಣಗಳಿಂದ ವೇತನ ವಿಳಂಬವಾಗುತ್ತಿದೆ. ಆದರೆ, ತಮ್ಮ ತಪ್ಪಿಲ್ಲದಿದ್ದರೂ ಹೆಚ್ಚುವರಿ ಬಡ್ಡಿ ಕಟ್ಟುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ನನ್ನನ್ನು ಸಂಪರ್ಕಿಸಿದ್ದಾರೆ. ಹಾಗಾಗಿ, ಬಡ್ಡಿ ವಿಧಿಸದಂತೆ ತಡೆಯಲು ತಂತ್ರಾಂಶಗಳಲ್ಲೇ ಮಾರ್ಪಾಡು ಮಾಡುವಂತೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
Advertisement