
ಬೆಂಗಳೂರು: ನಗರದಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು 38 ಕೆರೆಗಳಿಗೆ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲು ನಿರ್ಧಿರಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆರೆ ವಿಭಾಗವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 38 ಕೆರೆಗಳಿಗೆ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದು, ಇದಕ್ಕಾಗಿ ಪಾಲಿಕೆ ಮುಖ್ಯ ಆಯುಕ್ತರಿಂದ 14 ಕೋಟಿ ರೂ.ಗಳನ್ನು ಕೋರಿದೆ.
ಕೆರೆಗಳಿಂದ ನೀರು ಹೊರಹೋಗುವುದನ್ನು ನಿಯಂತ್ರಿಸುವುದು ಮತ್ತು ಭಾರೀ ಮಳೆಯಾದಾಗಲೆಲ್ಲಾ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕದಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದೆ.
ಹಿರಿಯ ಎಂಜಿನಿಯರ್ ಅವರು ಮಾತನಾಡಿ, ಯಲಹಂಕದ 6 , ಬೊಮ್ಮನಹಳ್ಳಿಯಲ್ಲಿ 8, ದಾಸರಹಳ್ಳಿಯಲ್ಲಿ 5, ಆರ್‌ಆರ್ ನಗರದಲ್ಲಿ 6, ಮಹಾದೇವಪುರದಲ್ಲಿ 10, ಬೆಂಗಳೂರು ದಕ್ಷಿಣದಲ್ಲಿ 2 ಮತ್ತು ಪಶ್ಚಿಮ ವಲಯಗಳಲ್ಲಿ ಒಂದು ಕೆರೆಯಲ್ಲಿ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಅನುಮೋದನೆ ಕೋರಿ ಮುಖ್ಯ ಆಯುಕ್ತರ ಕಚೇರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲಾಳಸಂದ್ರ, ದೊಡ್ಡಬೊಮ್ಮಸಂದ್ರ, ಅತ್ತೂರು ಮತ್ತು ಕೋಗಿಲು ಕೆರೆಗಳಲ್ಲಿ ಸ್ಲೂಯಿಸ್ ಗೇಟ್‌ಗಳನ್ನು ನಿರ್ಮಿಸುವುದರಿಂದ ಯಲಹಂಕದಲ್ಲಿ ಎದುರಾಗುವ ಪ್ರವಾಹದ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಅದೇ ರೀತಿ, ಯಲಚೇನಹಳ್ಳಿ ಮತ್ತು ಸುಬ್ರಹ್ಮಣ್ಯಪುರ ಕೆರೆಗಳಲ್ಲಿ ಮತ್ತು ದಕ್ಷಿಣ ವಲಯದ ಇತರೆ ಜಲಮೂಲಗಳಲ್ಲೂ ಈ ಗೇಟ್‌ಗಳನ್ನು ಅಳವಡಿಸಲಾಗುವುದು. ದಕ್ಷಿಣ ವಲಯದ ಫಯಾಜಾಬಾದ್ ಮತ್ತು ಕೃಷ್ಣ ನಗರದಂತಹ ತಗ್ಗು ಪ್ರದೇಶಗಳ ಪ್ರವಾಹವನ್ನು ತಡೆಯಲು ಇದು ಸಹಾಯ ಮಾಡುತ್ತದೆ ಎದು ಹೇಳಿದ್ದಾರೆ.
ಪಣತ್ತೂರು ಮತ್ತು ಸಾದರಮಂಗಲ ಕೆರೆಗಳಲ್ಲೂ ಸ್ಯೂಯಿಸ್ ಗೇಟ್ ಮತ್ತು ತ್ಯಾಜ್ಯ ತಡೆಗೋಡೆಗಳನ್ನು ನಿರ್ಮಿಸಲಾಗುವುದು. ಕೈಕೊಂಡರಹಳ್ಳಿ,ಮುನ್ನೇಕೊಳಲು ಕೆರೆ ಮತ್ತು ಮಹದೇವಪುರ ವಲಯದ ಕೆಲವು ಜಲಮೂಲಗಳಲ್ಲಿ ಆ ಗೇಟ್‌ಗಳನ್ನು ಸ್ಥಾಪಿಸಲಾಗವುದು. ಬೇಸಿಗೆಯಲ್ಲಿ ಕೆರೆಗಳು ಒಣಗದಂತೆ ನೋಡಿಕೊಳ್ಳಲು ಈ ಗೇಟ್‌ಗಳು ಸಹಾಯ ಮಾಡುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಟ
ಕೆರೆಗಳ ಭೌಗೋಳಿಕ ವೈಶಿಷ್ಟ್ಯಗಳನ್ನು ಅವಲಂಬಿಸಿ ಪ್ರತಿಯೊಂದು ಗೇಟ್ ಮತ್ತು ತ್ಯಾಜ್ಯ ತಡೆಗೋಡೆಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆ 25 ಲಕ್ಷದಿಂದ 70 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತದೆ. 38 ಕೆರೆಗಳಲ್ಲಿ ನಡೆಸುವ ಯೋಜನೆಯ ಒಟ್ಟು ವೆಚ್ಚ 14 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಯೋಜನೆಗೆ ಮುಖ್ಯ ಆಯುಕ್ತರ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement