ಬದುಕಿದ್ದರೂ ಸರ್ಕಾರಿ ದಾಖಲೆಗಳಲ್ಲಿ 'ಮೃತ' ಎಂದು ನಮೂದು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆ ಪರದಾಟ, ಉಪ ಲೋಕಾಯುಕ್ತ ಮಾಡಿದ್ದೇನು..?

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
File photo
ಉಪ ಲೋಕಾಯುಕ್ತ ಕಚೇರಿ
Updated on

ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಆಡಳಿತ ಯಂತ್ರದ ಗಂಭೀರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಸಂಕಷ್ಟ ಅನುಭವಿಸುವಂತಾಗಿದೆ.

ಜೀವಂತವಾಗಿದ್ದ ಮಹಿಳೆಯನ್ನು ಸರ್ಕಾರಿ ದಾಖಲೆಗಳಲ್ಲಿ ಮೃತ ಎಂದು ದಾಖಲಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಧರ್ಮಸಾಗರ ಗ್ರಾಮದ ನಿವಾಸಿ ಎನ್. ಹಂಪಮ್ಮ ಅವರು ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟವೇ ಈ ಪ್ರಕರಣಕ್ಕೆ ಕಾರಣವಾಗಿದೆ. ಅವರ ಪತಿ ಎನ್. ತಿಮ್ಮರೆಡ್ಡಿ 2024ರಲ್ಲಿ ನಿಧನರಾದ ಬಳಿಕ, ಯಾವುದೇ ಸರಿಯಾದ ಪರಿಶೀಲನೆ ನಡೆಸದೆ ಹೊಸಪೇಟೆ ತಾಲೂಕು ಕಚೇರಿಯ ಅಧಿಕಾರಿಗಳು ಹಂಪಮ್ಮ ಅವರನ್ನು ಸತ್ತವರು ಎಂದು ದಾಖಲೆಯಲ್ಲಿ ನಮೂದಿಸಿದ್ದರು.

ಈ ಒಂದು ತಪ್ಪು ದಾಖಲೆಯಿಂದಾಗಿ ಹಂಪಮ್ಮ ಅವರಿಗೆ ಸರ್ಕಾರದಿಂದ ದೊರೆಯಬೇಕಿದ್ದ ಅನೇಕ ಕಲ್ಯಾಣ ಯೋಜನೆಗಳ ಸೌಲಭ್ಯಗಳು ತಕ್ಷಣವೇ ಸ್ಥಗಿತಗೊಂಡಿದ್ದವು. ಪಿಂಚಣಿ, ಅನುದಾನ, ಮತ್ತು ಇತರ ನೆರವುಗಳ ಮೇಲೆ ಅವಲಂಬಿತವಾಗಿದ್ದ ಹಂಪಮ್ಮ ಅವರ ಬದುಕು ಸಂಕಷ್ಟಕ್ಕೆ ಸಿಲುಕಿತು.

ತಾವು ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ಹಂಪಮ್ಮ ಅವರು ಹಲವು ಬಾರಿ ಸಂಬಂಧಿತ ಕಚೇರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ.

File photo
ಮಂತ್ರಾಲಯದಲ್ಲಿರುವ ಕರ್ನಾಟಕ ಛತ್ರದ ದುಸ್ಥಿತಿ ಕಂಡು ಹೌಹಾರಿದ ಉಪ ಲೋಕಾಯುಕ್ತ: ಸ್ವಯಂಪ್ರೇರಿತ ದೂರು ದಾಖಲು!

ತಮ್ಮ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳಲ್ಲಿ ದೋಷ ಸರಿಪಡಿಸಲು ಮನವಿ ಮಾಡಿದರೂ, ಅವರ ಸಮಸ್ಯೆ ಕಡೆಗಣಿಸಲಾಗಿತ್ತು. ಇದರಿಂದ ಅವರು ಹಲವು ತಿಂಗಳುಗಳ ಕಾಲ ಸಂಕಷ್ಟ ಅನುಭವಿಸಿದ್ದಾರೆ.

ಈ ನಡುವೆ ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಉಪ ಲೋಕಾಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೊಸಪೇಟೆ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಬೈಲುವದ್ದಿಗೇರಿ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ, ಈ ಅಧಿಕಾರಿಗಳು 2026ರ ಮೇ 20ರಂದು ವೈಯಕ್ತಿಕವಾಗಿ ಹಾಜರಾಗಿ ವಿವರಣೆಗೊಳಗಾಗುವಂತೆಯೂ ಸೂಚನೆ ನೀಡಿದ್ದಾರೆ.

ಉಪ ಲೋಕಾಯುಕ್ತರು ಈ ಪ್ರಕರಣವನ್ನು ಆಡಳಿತ ದುರ್ನಿರ್ವಹಣೆ ಮತ್ತು ಕರ್ತವ್ಯ ಲೋಪ ಎಂದು ಪರಿಗಣಿಸಿ, ಇದು ಸಂವಿಧಾನದ ಕಲಂ 14, 21 ಮತ್ತು 300A ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಕ್ಷಣವೇ ಹಂಪಮ್ಮ ಅವರ ದಾಖಲೆಗಳಲ್ಲಿ ಉಂಟಾದ ದೋಷಗಳನ್ನು ಸರಿಪಡಿಸಿ, ಆಧಾರ್ ವಿವರಗಳನ್ನು ತಿದ್ದುವಂತೆ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದ್ದಾರೆ. ಜೊತೆಗೆ, ಈ ಘಟನೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಿಗೂ ಆದೇಶದ ಪ್ರತಿಯನ್ನು ರವಾನಿಸಿದ್ದಾರೆ.

ಅಧಿಕಾರಿಗಳು ಮಾಡುವ ಒಂದು ಸಣ್ಣ ನಿರ್ಲಕ್ಷ್ಯ ಒಬ್ಬ ಮಹಿಳೆಯ ಬದುಕನ್ನು ಹೇಗೆ ಸಂಕಷ್ಟಕ್ಕೆ ತಳ್ಳಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com