

ಬೆಂಗಳೂರು: ನಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಪಠ್ಯದೊಂದಿಗೆ ಆಟದಲ್ಲೂ ಹಾಗೂ ತಂತ್ರಜ್ಞಾನದಲ್ಲೂ ಮುಂದಿರಬೇಕು ಅನ್ನುತ್ತಾ ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆ. ಈ ವೇಳೆ ಡೊನೇಷನ್ ಅನ್ನೋದು ತಪ್ಪು ಎಂದು ಗೊತ್ತಿದ್ದರು ಸಹ ಸಾವಿರಾರೂ ರೂಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆ. ಆದ್ರೆ, ಇದೀಗ ಖಾಸಗಿ ಶಾಲೆಗಳ ಡೊನೇಷನ್ ಹಾವಳಿಗೆ ಲಗಾಮು ಹಾಕಲು ಮುಂದಾಗಿರುವ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:
ಡೊನೇಷನ್ ಪಡೆದರೆ, 10 ಪಟ್ಟು ದಂಡ!
ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಮಯದಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದು ಮತ್ತು ಪೋಷಕರಿಗೆ ಪಾರದರ್ಶಕತೆ ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು, ಖಾಸಗಿ ಶಾಲೆಗಳು 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ವೆಬ್‌ಸೈಟ್ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ತಿಳಿಸಿದೆ.
ಮುಂದುವರೆದು, ದಾಖಲಾತಿ ಪ್ರಕ್ರಿಯೆಯಲ್ಲಿ ಪೋಷಕರಿಂದ ಕಾನೂನುಬಾಹಿರವಾಗಿ ಡೊನೇಷನ್ ಪಡೆದರೆ, ಪಡೆದ ಶುಲ್ಕದ 10 ಪಟ್ಟು ದಂಡವನ್ನು ಆ ಶಾಲೆಗಳಿಗೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರವೇಶ ಪರೀಕ್ಷೆ ನಡೆಸಿದರೆ ದಂಡ
ಇದೆ ವೇಳೆ ಖಾಸಗಿ ಶಾಲೆಗಳಲ್ಲಿ ಸೀಟು ನೀಡುವ ಮುನ್ನ ಮಗು ಅಥವಾ ಪೋಷಕರನ್ನು ಯಾವುದೇ ರೀತಿಯ ಟೆಸ್ಟ್ ಅಥವಾ ಸಂದರ್ಶನಕ್ಕೆ ಒಳಪಡಿಸಿದರೆ ಅಂತಹ ಶಾಲೆಗಳಿಗೆ ₹25,000 ದಂಡ ಕೂಡ ವಿಧಿಸಲಾಗುತ್ತದೆ. ಪುನರಾವರ್ತಿತ ತಪ್ಪಿಗೆ ಪ್ರತಿ ಬಾರಿ 50,000 ರೂಪಾಯಿ ದಂಡ ಎಂದು ಹೇಳಲಾಗಿದೆ.