

ಬೆಂಗಳೂರು: ‘ಗೃಹಿಣಿ’ (Homemaker) ಎಂಬ ಪದವು ಲಿಂಗ ತಟಸ್ಥವಾಗಿದ್ದು, ಅದು ಪುರುಷ ಅಥವಾ ಮಹಿಳೆ ಇಬ್ಬರನ್ನೂ ಸೂಚಿಸಬಹುದು. ಅಲ್ಲದೆ, ಉದ್ಯೋಗದಲ್ಲಿರುವವರು, ಕುಟುಂಬದ ಆರ್ಥಿಕ ಹೊಣೆ ಹೊತ್ತಿರುವವರು ಅಥವಾ ವೇತನ ಪಡೆಯುವವರನ್ನೂ ‘ಗೃಹಿಣಿ’ ಎಂದು ಪರಿಗಣಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಚಿಲ್ಲಕುರ್ ಸುಮಲತಾ ಅವರು ಈ ಆದೇಶ ಹೊರಡಿಸಿದ್ದು, ಪಶ್ಚಿಮ ಬಂಗಾಳದ ಪಂಪಾಲಾಲ್ ಅವರು 2018ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಅಂಗೀಕರಿಸಿದ್ದಾರೆ. 2018ರಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ನೀಡಿದ್ದ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ 1.96 ಲಕ್ಷ ರೂಪಾಯಿ ನೀಡುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
2013ರ ಅಕ್ಟೋಬರ್ 19ರಂದು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ, ಅಜಾಗರೂಕತೆಯಿಂದ ಚಲಾಯಿಸಲಾದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾದ ಪರಿಣಾಮ ಪಂಪಾಲಾಲ್ ಗಾಯಗೊಂಡಿದ್ದರು.
ಅಪಘಾತ ಸಂಭವಿಸಿದ ದಿನದಂದು ಅರ್ಜಿದಾರರು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಪರಿಗಣಿಸಿದರೂ, ಅವರು ಗೃಹಿಣಿಯಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಪಂಪಾಲಾಲ್ ಅವರ ಪರ ವಕೀಲರು ವಾದಿಸಿದರು.
ಆದರೆ, ಅರ್ಜಿದಾರರ ಹೇಳಿಕೆಯ ಪ್ರಕಾರ ಅವರು ಸ್ನಾತಕೋತ್ತರ ಪದವಿ ಪಡೆದಿದ್ದು, ಇಂತಹ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ವ್ಯಕ್ತಿಯನ್ನು ಗೃಹಿಣಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆಎಸ್‌ಆರ್‌ಟಿಸಿ ಪರ ವಕೀಲರು ವಾದಿಸಿದರು.
ಕುಟುಂಬಕ್ಕಾಗಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಮಹಿಳೆಯನ್ನೂ, ಆಕೆ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ, ‘ಗೃಹಿಣಿ’ ಎಂದು ಪರಿಗಣಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಮಹಿಳೆಯನ್ನು ‘ಗೃಹಿಣಿ’ ಎಂದು ಪರಿಗಣಿಸಲು ಆಕೆ ಅನಕ್ಷರಸ್ಥಳಾಗಿರಬೇಕು, 24 ಗಂಟೆಯೂ ಮನೆಯಲ್ಲಿ ಇರಬೇಕು ಅಥವಾ ಮನೆಯ ಕೆಲಸವನ್ನಷ್ಟೇ ಮಾಡಬೇಕು ಎಂಬುದನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
‘ಗೃಹಿಣಿ’ ಎಂಬ ಪದ ಲಿಂಗ ತಟಸ್ಥವಾಗಿದ್ದು, ಅದು ಪುರುಷ ಅಥವಾ ಮಹಿಳೆ ಇಬ್ಬರನ್ನೂ ಸೂಚಿಸುತ್ತದೆ. ಆದ್ದರಿಂದ ಅರ್ಜಿದಾರರನ್ನು ಗೃಹಿಣಿಯಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರರ ಕಾಲ್ಪನಿಕ ಆದಾಯವನ್ನು 8,000 ರೂಪಾಯಿ ಎಂದು ಪರಿಗಣಿಸಿದ ನ್ಯಾಯಾಲಯ, ಅವರು ಕನಿಷ್ಠ ಮೂರು ತಿಂಗಳು ವಿಶ್ರಾಂತಿ ಪಡೆಯಬೇಕಾಗಿತ್ತು ಎಂದು ಹೇಳಿದೆ. ಈ ಮೂರು ತಿಂಗಳ ಅವಧಿಯ ಆರ್ಥಿಕ ನಷ್ಟ 24,000 ರೂಪಾಯಿ ಆಗುತ್ತದೆ.
ನ್ಯಾಯಮಂಡಳಿ ಈಗಾಗಲೇ ನೀಡಿರುವ ಪರಿಹಾರದ ಮೊತ್ತದ ಜೊತೆಗೆ ಅರ್ಜಿದಾರರು ಹೆಚ್ಚುವರಿಯಾಗಿ 1.96 ಲಕ್ಷ ರೂಪಾಯಿ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ಈ ಮೊತ್ತಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿ ಅನ್ವಯವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.