ಬಿ-ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ: ಕೇವಲ ಶೇ.5.5ರಷ್ಟು ಮಂದಿ ಅರ್ಜಿ ಸಲ್ಲಿಕೆ

ಬೆಂಗಳೂರಿನಲ್ಲಿರುವ 8,49,975 ಬಿ-ಖಾತಾ ಆಸ್ತಿಗಳ ಪೈಕಿ ಆಗಸ್ಟ್ 14ರವರೆಗೆ ಕೇವಲ 47,088 ಆಸ್ತಿಗಳ ಮಾಲೀಕರು ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯಾದ ಭೂ ಗ್ಯಾರಂಟಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಭಾರಿ ಶುಲ್ಕ ರಿಯಾಯಿತಿ ನೀಡಿದ್ದರೂ, ಬೆಂಗಳೂರಿನ ಬಿ-ಖಾತಾ ಆಸ್ತಿ ಮಾಲೀಕರ ಪೈಕಿ ಕೇವಲ ಶೇಕಡಾ 5.54ರಷ್ಟು ಮಂದಿ ಮಾತ್ರ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿರುವ 8,49,975 ಬಿ-ಖಾತಾ ಆಸ್ತಿಗಳ ಪೈಕಿ ಆಗಸ್ಟ್ 14ರವರೆಗೆ ಕೇವಲ 47,088 ಆಸ್ತಿಗಳ ಮಾಲೀಕರು ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 24,965 ಅರ್ಜಿಗಳಿಗೆ ಮಾತ್ರ ಅನುಮೋದನೆ ದೊರೆತಿದೆ. ಯೋಜನೆಯಡಿ ಸರ್ಕಾರಕ್ಕೆ 311.77 ಕೋಟಿ ರೂಪಾಯಿ ಆದಾಯ ಬಂದಿದೆ. ಆದರೆ, 10,000 ಕೋಟಿ ರೂಪಾಯಿಗಳವರೆಗೆ ಆದಾಯ ನಿರೀಕ್ಷಿಸಲಾಗಿತ್ತು.

ಮಾರ್ಗದರ್ಶನ ಮೌಲ್ಯದ ಶೇಕಡಾ 5ರಷ್ಟಿದ್ದ ಪರಿವರ್ತನಾ ಶುಲ್ಕವನ್ನು ಶೇಕಡಾ 2ಕ್ಕೆ ಇಳಿಸಿ ರಿಯಾಯಿತಿ ನೀಡಿದ್ದ ಈ ಯೋಜನೆಯ ಅವಧಿ ಭಾನುವಾರ ಮುಕ್ತಾಯಗೊಂಡಿದೆ. ಯೋಜನೆಯನ್ನು ವಿಸ್ತರಿಸುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Representational image
ಬೆಂಗಳೂರು ಆಸ್ತಿ ಮಾಲೀಕರಿಗೆ GOOD NEWS; ಮನೆ ಬಾಗಿಲಿಗೇ ಖಾತೆ ತಲುಪಿಸಲು ಸರ್ಕಾರ ಸಿದ್ಧತೆ..!

ಅರ್ಜಿಗಳ ಸಂಖ್ಯೆಯಲ್ಲಿ ಕೊನೆಯ ಕ್ಷಣದಲ್ಲಿ ಏರಿಕೆಯಾಗಿದ್ದು, ಒಟ್ಟು ಅರ್ಜಿಗಳ ಸಂಖ್ಯೆ ಸುಮಾರು 75,000ಕ್ಕೆ ತಲುಪಿದೆ ಎಂದು ಜಿಬಿಎ ಮೂಲಗಳು ತಿಳಿಸಿವೆ. ಆದರೂ, ಇದು ಗುರುತಿಸಲಾಗಿರುವ 8.49 ಲಕ್ಷ ಬಿ-ಖಾತಾ ಆಸ್ತಿಗಳ ಪೈಕಿ ಕೇವಲ ಶೇಕಡಾ 8.82ರಷ್ಟು ಮಾತ್ರವಾಗಲಿದೆ.

ಕಳೆದ ವರ್ಷ ಘೋಷಿಸಲಾಗಿದ್ದ ಯೋಜನೆಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ, ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯೊಂದಿಗೆ ಜಿಬಿಎ ಮೇ ತಿಂಗಳಲ್ಲಿ ಅದನ್ನು ‘ಭೂ ಗ್ಯಾರಂಟಿ’ ಎಂದು ಮರುನಾಮಕರಣ ಮಾಡಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.

ರಿಯಾಯಿತಿ ನೀಡಿದರೂ ಶುಲ್ಕ ಹೆಚ್ಚೇ ಇದೆ: ಆಸ್ತಿ ಮಾಲೀಕರು

ಶಾಸಕ ಚಿದಾನಂದ ಎಂ. ಗೌಡ ಅವರ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನೀಡಿದ ಮಾಹಿತಿಯ ಪ್ರಕಾರ, ಸಲ್ಲಿಕೆಯಾಗಿರುವ 47,088 ಅರ್ಜಿಗಳ ಪೈಕಿ 24,965 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. 19,075 ಅರ್ಜಿಗಳು ಅನುಮೋದನೆಗಾಗಿ ಬಾಕಿ ಇದ್ದರೆ, 3,048 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ 4,615 ಅರ್ಜಿಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 84.38 ಕೋಟಿ ರೂಪಾಯಿ ಆದಾಯ ಗಳಿಸಿದೆ. ನಂತರದ ಸ್ಥಾನದಲ್ಲಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ 4,550 ಅರ್ಜಿಗಳ ಮೂಲಕ 84.15 ಕೋಟಿ ರೂಪಾಯಿ ಆದಾಯ ಗಳಿಸಿದೆ. ಬೆಂಗಳೂರು ದಕ್ಷಿಣ ಮತ್ತು ಪೂರ್ವ ನಗರ ಪಾಲಿಕೆಗಳು ತಲಾ 70 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿವೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಕೇವಲ 54 ಅರ್ಜಿಗಳ ಮೂಲಕ 1.27 ಕೋಟಿ ರೂಪಾಯಿ ಆದಾಯ ಬಂದಿದೆ.

ಕೆಲ ಆಸ್ತಿ ಮಾಲೀಕರ ಪ್ರಕಾರ, ಶುಲ್ಕದಲ್ಲಿ ರಿಯಾಯಿತಿ ನೀಡಿದ ನಂತರವೂ ನಿಯಮಬದ್ಧಗೊಳಿಸುವ ಶುಲ್ಕ ಲಕ್ಷಾಂತರ ರೂಪಾಯಿಗಳಷ್ಟಾಗುತ್ತಿದ್ದು, ಹಣ ಹೊಂದಿಸುವುದು ಕಷ್ಟವಾಗಿದೆ. ಅಲ್ಲದೆ, ಖಾತಾ ಪರಿವರ್ತನೆಯಿಂದ ತಕ್ಷಣ ಯಾವುದೇ ಪ್ರಯೋಜನವಾಗುತ್ತದೆ ಎಂಬ ಭರವಸೆಯೂ ತಮಗಿಲ್ಲ ಎಂದು ಅವರು ಹೇಳಿದ್ದಾರೆ.

ಬಿ-ಖಾತಾ ಆಸ್ತಿಗಳನ್ನು ನಿಯಮಬದ್ಧಗೊಳಿಸಲು ಕೇವಲ ಶುಲ್ಕ ರಿಯಾಯಿತಿ ನೀಡುವುದರಿಂದ ಸಾಕಷ್ಟು ಉತ್ತೇಜನ ಸಿಗುವುದಿಲ್ಲ ಎಂಬುದನ್ನು ಈ ನೀರಸ ಪ್ರತಿಕ್ರಿಯೆ ತೋರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com