

ಬೆಂಗಳೂರು: ಬೆಂಗಳೂರಿನ ಸುಮಾರು 23 ಲಕ್ಷ ಆಸ್ತಿ ಮಾಲೀಕರ ಮನೆ ಬಾಗಿಲಿಗೇ ಖಾತೆ ತಲುಪಿಸುವ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಖಾತೆ ವಿತರಣೆ, ಆಸ್ತಿ ತೆರಿಗೆ ಸಂಗ್ರಹ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತ ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಮಾಹಿತಿ ನೀಡಿದರು.
ನಗರದಲ್ಲಿ ಪ್ರಸ್ತುತ 18 ಲಕ್ಷ ಆಸ್ತಿ ಮಾಲೀಕರು ಮಾತ್ರ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ವಿವಿಧ ಅಂದಾಜುಗಳ ಪ್ರಕಾರ ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಅಂದರೆ, ಅರ್ಧಕ್ಕಿಂತ ಹೆಚ್ಚು ಆಸ್ತಿ ಮಾಲೀಕರು ತೆರಿಗೆ ಪಾವತಿಸುತ್ತಿಲ್ಲ. ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಆಸ್ತಿಗಳನ್ನು ಗುರುತಿಸಿ, ಅವುಗಳನ್ನು ಆಸ್ತಿ ತೆರಿಗೆ ಜಾಲಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಹದೇವಪುರ ವಲಯದ ಉದಾಹರಣೆ ನೀಡಿದ ಅವರು, ಸರ್ಕಾರಿ ದಾಖಲೆಗಳ ಪ್ರಕಾರ ಅಲ್ಲಿ 2.75 ಲಕ್ಷ ಆಸ್ತಿಗಳು ಮಾತ್ರ ತೆರಿಗೆ ವ್ಯಾಪ್ತಿಯಲ್ಲಿದ್ದವು. ಆದರೆ, ಸಮೀಕ್ಷೆ ನಡೆಸಿದಾಗ 4.47 ಲಕ್ಷ ಆಸ್ತಿಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ವಾಸ್ತವ ತೆರಿಗೆಗಿಂತ ಕಡಿಮೆ ಮೊತ್ತ ಪಾವತಿಸುತ್ತಿರುವ ಆಸ್ತಿ ಮಾಲೀಕರನ್ನು ಗುರುತಿಸಿ, ತೆರಿಗೆ ಮೌಲ್ಯಮಾಪನವನ್ನು ಮರುಪರಿಶೀಲಿಸಿ ಸಂಗ್ರಹವನ್ನು ಹೆಚ್ಚಿಸಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಖಾತೆ ನೀಡಿ, ಅವುಗಳನ್ನು ಆಸ್ತಿ ತೆರಿಗೆ ವ್ಯವಸ್ಥೆಗೆ ಸೇರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಕಾರ್ಯಕ್ಕಾಗಿ ಜಿಐಎಸ್, ಡ್ರೋನ್ ತಂತ್ರಜ್ಞಾನ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸುವಂತೆ ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಆಸ್ತಿ ಮಾಹಿತಿಯನ್ನು ಏಕೀಕರಿಸುವಂತೆ ಸಚಿವರು ಸೂಚಿಸಿದರು.
ನಗರದಲ್ಲಿ ಅಕ್ರಮವಾಗಿ ಅಳವಡಿಸಲಾಗುತ್ತಿರುವ ಡಿಜಿಟಲ್ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ನಿರ್ಮಾಣ ಹಾಗೂ ಕಟ್ಟಡ ಅವಶೇಷ ಸಾಗಿಸುವ ವಾಹನಗಳ ಮಾಲೀಕರು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೆ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಬೇಕು ಎಂದು ಹೇಳಿದರು.
ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಮತ್ತೆ ನಿಯಮ ಉಲ್ಲಂಘಿಸುವವರಿಂದ ಎರಡರಷ್ಟು ದಂಡ ವಸೂಲಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ನಗರದಲ್ಲಿ ಕಸ, ಕಟ್ಟಡ ಅವಶೇಷ ಹಾಗೂ ಇತರ ತ್ಯಾಜ್ಯವನ್ನು ತಡೆಯಲು ಮತ್ತು ಕಳೆ ಗಿಡಗಳನ್ನು ತೆರವುಗೊಳಿಸಲು ಆಗಸ್ಟ್ ತಿಂಗಳ ಪೂರ್ತಿ 'ತ್ಯಾಜ್ಯ ಮುಕ್ತ ಬೆಂಗಳೂರು' ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವರು ಘೋಷಿಸಿದರು.
ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಗರ ಪಾಲಿಕೆಗಳು, ಕೆ-ರೈಡ್, ಭಾರತೀಯ ರೈಲ್ವೆ, ನಮ್ಮ ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಈ ಅಭಿಯಾನ ನಡೆಸಲಿವೆ.
ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 1,616 ಸ್ಥಳಗಳಲ್ಲಿ ಸುಮಾರು 22,732 ಟನ್ ತ್ಯಾಜ್ಯ ಗುರುತಿಸಲಾಗಿದ್ದು, ತಿಂಗಳ ಅವಧಿಯ ವಿಶೇಷ ಅಭಿಯಾನದಲ್ಲಿ ಇದನ್ನು ಸಂಪೂರ್ಣವಾಗಿ ತೆರವುಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.