ಶಕ್ತಿ ಯೋಜನೆ ಸಕ್ಸಸ್ ಬೆನ್ನಲ್ಲೇ ಸಾರಿಗೆ ಸಂಸ್ಥೆಗಳಿಗೆ ಶಾಕ್; 5,650 ಕೋಟಿ ರೂ. ಬಾಕಿ ಉಳಿಸಿಕೊಂಡ ಸರ್ಕಾರ..!

ಇದರ ಜತೆಗೆ ವಿದ್ಯಾರ್ಥಿಗಳ ಬಸ್‌ ಪಾಸ್‌, ಸಾಲ ಹಾಗೂ ಬಡ್ಡಿ ಮರುಪಾವತಿ, ಕಟ್ಟಡ ನಿರ್ಮಾಣ, ಬಸ್‌ಗಳ ಖರೀದಿ, ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್‌), ಮೋಟಾರು ವಾಹನ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಉದ್ದೇಶಗಳಿಗೆ ಸಾರಿಗೆ ನಿಗಮಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಶಕ್ತಿ ಯೋಜನೆ’ಯು ಭರ್ಜರಿ ಯಶಸ್ಸು ಕಂಡಿದೆಯಾದರೂ, ರಾಜ್ಯದ ಸಾರಿಗೆ ಸಂಸ್ಥೆಗಳನ್ನು ಮಾತ್ರ ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ಉಚಿತ ಬಸ್ ಪ್ರಯಾಣದ ಸಬ್ಸಿಡಿ ಬಾಕಿ ಮೊತ್ತವಾಗಿ ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಬರೋಬ್ಬರಿ ರೂ.5,650.95 ಕೋಟಿ ಹಣ ಇನ್ನೂ ಬಿಡುಗಡೆಯಾಗಿಲ್ಲ.

ಬಾಕಿ ಮೊತ್ತ ಪಾವತಿಸಲು ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿರುವುದು ಸಾರಿಗೆ ನಿಗಮಗಳಿಗೆ ಸಂಕಷ್ಟ ತಂದಿದೆ.

2023ರ ಜೂನ್‌ 11ರಂದು ಯೋಜನೆ ಆರಂಭವಾದ ದಿನದಿಂದ 2026ರ ಜುಲೈ 31ರವರೆಗೆ ನಾಲ್ಕು ಸಾರಿಗೆ ನಿಗಮಗಳು ಶಕ್ತಿ ಯೋಜನೆಯಡಿ ಒಟ್ಟು ರೂ.20,955.96 ಕೋಟಿ ವೆಚ್ಚ ಮಾಡಿವೆ.

ಇದಕ್ಕೆ ಪ್ರತಿಯಾಗಿ ಸರ್ಕಾರ ರೂ.15,305.01 ಕೋಟಿ ಬಿಡುಗಡೆ ಮಾಡಿದ್ದು, ಇನ್ನೂ ರೂ.5,650.95 ಕೋಟಿ ಬಾಕಿ ಉಳಿದಿದೆ ಎಂದು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನ ಪರಿಷತ್‌ ಅಧಿವೇಶನದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್‌ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಸಾರಿಗೆ ಇಲಾಖೆ ಹಣಕಾಸು ಇಲಾಖೆಗೆ ಮನವಿ ಮಾಡಿತ್ತು. ಆದರೆ, ಶಕ್ತಿ ಯೋಜನೆಗೆ ಈಗಾಗಲೇ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದ್ದು, ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರ ಈಗಾಗಲೇ ಅನುದಾನ ನೀಡಿರುವುದರಿಂದ ಬಾಕಿ ಮೊತ್ತ ಪಾವತಿಸಲು ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ.

File photo
ಶಕ್ತಿ ಯೋಜನೆಯಡಿ 'ಸ್ಮಾರ್ಟ್ ಕಾರ್ಡ್' ವಿತರಣೆಗೆ ಅಂತಿಮ ಸಿದ್ಧತೆ: ಸಚಿವ ಬೈರತಿ ಸುರೇಶ್

ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳು ನಿರ್ವಹಿಸುವ ಬಸ್‌ಗಳ ವೇಳಾಪಟ್ಟಿಯ ಆಧಾರದ ಮೇಲೆ ಅನುದಾನವನ್ನು ನಿರ್ಧರಿಸಲಾಗುತ್ತದೆ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.

ಇದರ ಜತೆಗೆ ವಿದ್ಯಾರ್ಥಿಗಳ ಬಸ್‌ ಪಾಸ್‌, ಸಾಲ ಹಾಗೂ ಬಡ್ಡಿ ಮರುಪಾವತಿ, ಕಟ್ಟಡ ನಿರ್ಮಾಣ, ಬಸ್‌ಗಳ ಖರೀದಿ, ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್‌), ಮೋಟಾರು ವಾಹನ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಉದ್ದೇಶಗಳಿಗೆ ಸಾರಿಗೆ ನಿಗಮಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಿದೆ. ವೇತನ, ಡೀಸೆಲ್‌, ಭವಿಷ್ಯ ನಿಧಿ ಹಾಗೂ ರಜೆ ನಗದೀಕರಣಕ್ಕೆ ಸಂಬಂಧಿಸಿದ ಬಾಕಿ ಪಾವತಿಗಳಿಗೂ ನೆರವು ನೀಡಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ವಿವಿಧ ವಿಭಾಗಗಳ ಅಡಿಯಲ್ಲಿ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು ರೂ.18,459.37 ಕೋಟಿ ಆರ್ಥಿಕ ನೆರವು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

797 ಕೋಟಿ ಉಚಿತ ಪ್ರಯಾಣ

ಈ ನಡುವೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. 2023ರ ಜೂನ್‌ನಿಂದ 2026ರ ಜುಲೈವರೆಗೆ ನಾಲ್ಕು ಸಾರಿಗೆ ನಿಗಮಗಳು ಒಟ್ಟು 797.16 ಕೋಟಿ ಉಚಿತ ಪ್ರಯಾಣದ ಟಿಕೆಟ್‌ಗಳನ್ನು ವಿತರಿಸಿವೆ.

2023-24ರಲ್ಲಿ 183.06 ಕೋಟಿ ಪ್ರಯಾಣಗಳು ದಾಖಲಾಗಿದ್ದರೆ, 2024-25ರಲ್ಲಿ ಇದು 244.65 ಕೋಟಿಗೆ ಏರಿಕೆಯಾಗಿದೆ. 2025-26ರಲ್ಲಿ 275.70 ಕೋಟಿ ಉಚಿತ ಪ್ರಯಾಣಗಳು ನಡೆದಿವೆ. 2026-27ರ ಮೊದಲ ನಾಲ್ಕು ತಿಂಗಳಲ್ಲಿ, ಅಂದರೆ ಜುಲೈವರೆಗೆ, ಮತ್ತೆ 93.75 ಕೋಟಿ ಉಚಿತ ಪ್ರಯಾಣಗಳು ದಾಖಲಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com