

ಬೆಂಗಳೂರು: ರಾಜಧಾನಿಯ ಭೌಗೋಳಿಕ ವಿಸ್ತರಣೆ ಮತ್ತು ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ, ಬೆಂಗಳೂರು ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಸಂಘಟಿಸಲು ರಾಜ್ಯ ಸರ್ಕಾರ ಮಹತ್ವದ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುತ್ತಿದೆ.
ಸುಮಾರು 1,000 ಚದರ ಕಿಲೋಮೀಟರ್‌ಗಿಂತಲೂ ಅಧಿಕ ವ್ಯಾಪ್ತಿ ಹೊಂದಿರುವ ಬೆಂಗಳೂರು ಪೊಲೀಸ್ ಇಲಾಖೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಪೂರ್ವ (ಐಟಿ ಕಾರಿಡಾರ್ ಒಳಗೊಂಡಂತೆ) ಮತ್ತು ಪಶ್ಚಿಮ ವಲಯಗಳಾಗಿ ಪ್ರತ್ಯೇಕ ಕಮಿಷನರೇಟ್ ಮಾಡಲು ಉನ್ನತ ಮಟ್ಟದ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಪುನಾರಚನೆಯಲ್ಲಿ ಎರಡು ಪ್ರಮುಖ ಅಂಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮೊದಲನೆಯದಾಗಿ ಭೌಗೋಳಿಕವಾಗಿ ಹೊಂದಿಕೊಂಡ ಪ್ರದೇಶಗಳನ್ನು ಒಂದೇ ಘಟಕವಾಗಿ ರೂಪಿಸುವುದು, ಎರಡನೆಯದಾಗಿ ಪ್ರತಿಯೊಂದು ಘಟಕಕ್ಕೂ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸಲು ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯ ಕಲ್ಪಿಸುವುದು.
ಈ ಸಂಬಂಧ ಮೂರು-ನಾಲ್ಕು ಮಾದರಿಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಒಂದು ಮಾದರಿಯಲ್ಲಿ ನಗರವನ್ನು ಪೂರ್ವ ಮತ್ತು ಪಶ್ಚಿಮ ವಲಯಗಳಾಗಿ ವಿಭಜಿಸುವ ಚಿಂತನೆ ಇದೆ. ಪೂರ್ವ ವಲಯದಲ್ಲಿ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಹರಡಿರುವ ಐಟಿ ಕಾರಿಡಾರ್ ಒಳಗೊಂಡಿರಲಿದ್ದು, ಪಶ್ಚಿಮ ವಲಯದಲ್ಲಿ ಉತ್ತರ, ದಕ್ಷಿಣ ಹಾಗೂ ಕೇಂದ್ರ ವಿಭಾಗಗಳು ಸೇರಲಿವೆ.
ಇನ್ನೊಂದು ಮಾದರಿಯಲ್ಲಿ ಹೊರವರ್ತುಲ ರಸ್ತೆ (ಒಆರ್‌ಆರ್) ಆಧಾರವಾಗಿ ಪುನಾರಚನೆ ಮಾಡುವ ಚಿಂತನೆ ಇದ್ದರೆ, ಮತ್ತೊಂದು ಮಾದರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯನ್ನು ಆಧರಿಸಿ ಮರುಹೊಂದಾಣಿಕೆ ಮಾಡುವ ಪ್ರಸ್ತಾವವೂ ಇದೆ.
ನಗರ ಕೇಂದ್ರವನ್ನು ಮೂಲ ಘಟಕವಾಗಿರಿಸಿ ಹೊರವಲಯ ಹಾಗೂ ಹೊಸದಾಗಿ ಸೇರ್ಪಡೆಯಾದ ಪೊಲೀಸ್ ಠಾಣೆಗಳ ಆಧಾರದಲ್ಲಿಯೂ ವಿಭಾಗಗಳನ್ನು ರೂಪಿಸುವ ಆಯ್ಕೆಯೂ ಪರಿಶೀಲನೆಯಲ್ಲಿದೆ.
ಈ ನಡುವೆ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ಅಪರಾಧ ಇತ್ಯಾದಿ ವಿಭಾಗಗಳ ಆಧಾರದ ಮೇಲೆ ಪ್ರತ್ಯೇಕ ಮುಖ್ಯಸ್ಥರನ್ನು ನೇಮಿಸುವ ಮಾದರಿ ಗೊಂದಲ ಹಾಗೂ ಅಧಿಕಾರ ವ್ಯಾಪ್ತಿಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.
ಜಿಬಿಎ ಮಾದರಿಯ ಪುನಾರಚನೆಯೂ ಪೊಲೀಸ್ ಅಧಿಕಾರವನ್ನು ವಿಭಜಿಸುವ ಸಾಧ್ಯತೆ ಇರುವುದರಿಂದ ಸೂಕ್ತವಾಗುವುದಿಲ್ಲ ಎಂದೂ ಹೇಳಲಾಗುತ್ತಿದೆ.
ಸುಮಾರು 1,000 ಚದರ ಕಿ.ಮೀ. ವ್ಯಾಪ್ತಿಯಲ್ಲಿ 118 ಪೊಲೀಸ್ ಠಾಣೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಪುನಾರಚನೆ ಕುರಿತ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿತ್ತು. ಆದರೆ, ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈಗ ಅದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಮೂಲಸೌಕರ್ಯ ಹಾಗೂ ಆಡಳಿತ ಸುಧಾರಣೆಗೆ ಒತ್ತು ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ಪೊಲೀಸ್ ವ್ಯವಸ್ಥೆಯ ಪುನಾರಚನೆಗೂ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 188 ಪೊಲೀಸ್ ಠಾಣೆಗಳಿದ್ದು, ಅವುಗಳಲ್ಲಿ 117 ಕಾನೂನು ಮತ್ತು ಸುವ್ಯವಸ್ಥೆ, 53 ಸಂಚಾರ, 9 ಸೈಬರ್ ಮತ್ತು ಆರ್ಥಿಕ ಅಪರಾಧ, 8 ಮಹಿಳಾ ಠಾಣೆಗಳು ಹಾಗೂ 1 ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಸೇರಿವೆ.
ಇದಲ್ಲದೆ, ನಗರದಲ್ಲಿ ಒಟ್ಟು 26 ಡಿಸಿಪಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 11 ಕಾನೂನು ಮತ್ತು ಸುವ್ಯವಸ್ಥೆ, 4 ಸಂಚಾರ, 4 ಸಿಟಿ ಆರ್ಮ್ಡ್ ರಿಸರ್ವ್ (ಸಿಎಆರ್), 2 ಅಪರಾಧ ವಿಭಾಗ ಹಾಗೂ ಉಳಿದವರು ನಿಯಂತ್ರಣ ಕೊಠಡಿ, ಕಮಾಂಡ್ ಸೆಂಟರ್, ಗುಪ್ತಚರ, ವಿಐಪಿ ಭದ್ರತೆ ಮತ್ತು ಆಡಳಿತ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಗರ ವಿಸ್ತರಣೆಯೊಂದಿಗೆ ಹೊರವಲಯದ ಪೊಲೀಸ್ ಠಾಣೆಗಳು ಹಂತ ಹಂತವಾಗಿ ಬಿಸಿಪಿಗೆ ಸೇರ್ಪಡೆಯಾಗುತ್ತಿರುವುದರಿಂದ ಆಡಳಿತ ನಿರ್ವಹಣೆ ಕಷ್ಟಕರವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸುಮಾರು 25,000 ಸಿಬ್ಬಂದಿ ಇದ್ದು, ಅವರಲ್ಲಿ 1,800 ಮಂದಿ ಉಪನಿರೀಕ್ಷಕರು ಮತ್ತು ಅದಕ್ಕಿಂತ ಮೇಲಿನ ಹುದ್ದೆಯವರಾಗಿದ್ದಾರೆ. ಆದರೆ, ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್ ಹಾಗೂ ಪಿಎಸ್‌ಐ ಹುದ್ದೆಗಳು ಸೇರಿದಂತೆ ಸುಮಾರು 4,000 ಹುದ್ದೆಗಳು ಖಾಲಿ ಇವೆ.
ನಗರಕ್ಕೆ ಹೊಸ ಪೊಲೀಸ್ ಠಾಣೆಗಳು ಸೇರ್ಪಡೆಯಾಗುತ್ತಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಯ ಅನುಪಾತ ಕಡಿಮೆಯಾಗಿರುವುದು ಗುಣಮಟ್ಟದ ಪೊಲೀಸ್ ಸೇವೆಗೆ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.