ಕೃಷಿ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪ: ಅಮಾನತುಗೊಂಡ ಕಾರ್ಯದರ್ಶಿ ದಾಖಲೆಗಳೊಂದಿಗೆ ಪರಾರಿ, FIR ದಾಖಲು

ಎಸ್‌.ಸಿ. ಉಮೇಶ್ ಅವರು 2011ರ ಏಪ್ರಿಲ್ 28ರಿಂದ 2026ರ ಫೆಬ್ರವರಿ 26ರವರೆಗೆ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಹಣ ದುರ್ಬಳಕೆ ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕ ಮಂಡಳಿ ಮಾರ್ಚ್ 13ರಂದು ಅವರನ್ನು ಅಮಾನತುಗೊಳಿಸಿತ್ತು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಕೃಷಿ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಸಂಘಕ್ಕೆ ಸೇರಿದ ಪ್ರಮುಖ ದಾಖಲೆಗಳನ್ನು ಹೊತ್ತು ಪರಾರಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಮನಗರ ಜಿಲ್ಲೆಯ ಹಾರೋಹಳ್ಳಿ ಸಮೀಪದ ಕೊಲ್ಲಿಗನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಪ್ರಸ್ತುತ ಕಾರ್ಯದರ್ಶಿ ಈ ಕುರಿತು ದೂರು ನೀಡಿದ್ದು, ಅಮಾನತುಗೊಂಡ ಮಾಜಿ ಕಾರ್ಯದರ್ಶಿ ಎಸ್‌.ಸಿ. ಉಮೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೂರಿನಲ್ಲಿ ಎಸ್‌.ಸಿ. ಉಮೇಶ್ ಅವರು 2011ರ ಏಪ್ರಿಲ್ 28ರಿಂದ 2026ರ ಫೆಬ್ರವರಿ 26ರವರೆಗೆ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಹಣ ದುರ್ಬಳಕೆ ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕ ಮಂಡಳಿ ಮಾರ್ಚ್ 13ರಂದು ಅವರನ್ನು ಅಮಾನತುಗೊಳಿಸಿತ್ತು.

ಆದರೆ, ಅಮಾನತು ಬಳಿಕ ಸಂಘಕ್ಕೆ ಸೇರಿದ ದಾಖಲೆಗಳು ಹಾಗೂ ಉಪಕರಣಗಳನ್ನು ಹಸ್ತಾಂತರಿಸದೆ ಉಮೇಶ್ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಸಂಘದ ವಾರ್ಷಿಕ ಲೆಕ್ಕಪರಿಶೋಧನೆ (ಆಡಿಟ್) ನಡೆಸಲು ಹಾಗೂ ದೈನಂದಿನ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾಗಿದ್ದ ಎಂಟು ಪ್ರಮುಖ ದಾಖಲೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

File photo
ಸಿದ್ದರಾಮಯ್ಯ ವಿರುದ್ದ 37 ಶಾಸಕರಿಂದ ಸತೀಶ್‌ ಜಾರಕಿಹೊಳಿ ಸಹಿ ಸಂಗ್ರಹ: ಫೇಸ್‌ಬುಕ್ ಪೇಜ್‌ ಅಡ್ಮಿನ್‌ಗಳ ವಿರುದ್ಧ FIR

ಈ ದಾಖಲೆಗಳು ಇಲ್ಲದ ಕಾರಣ ಸಂಘದ ಆಡಳಿತ ಕಾರ್ಯಗಳಿಗೆ ತೊಂದರೆ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದರ ಬೆನ್ನಲ್ಲೇ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಾಧಾರಗಳಾಗಿದ್ದ ಕಾರಣವೇ ಉಮೇಶ್ ದಾಖಲೆಗಳನ್ನು ತೆಗೆದುಕೊಂಡು ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಸಂಘದ ಕಚೇರಿಗೆ ಬೀಗ ಹಾಕಲಾಗಿದ್ದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಅನುಮತಿ ಪಡೆದು ಬೀಗ ಒಡೆದು ಕಚೇರಿ ತೆರೆಯಲಾಯಿತು. ಈ ವೇಳೆ ಪರಿಶೀಲನೆ ನಡೆಸಿದಾಗ ಎಂಟು ಪ್ರಮುಖ ದಾಖಲೆಗಳು ಮತ್ತು ದಾಖಲೆ ಪುಸ್ತಕಗಳು ಕಾಣೆಯಾಗಿರುವುದು ಪತ್ತೆಯಾಗಿದೆ.

ಈ ಸಂಬಂಧ ಹಾರೋಹಳ್ಳಿ ಪೊಲೀಸರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ರ ಸೆಕ್ಷನ್ 109(10) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಣ ದುರ್ಬಳಕೆ ಆರೋಪ ಹಾಗೂ ದಾಖಲೆಗಳ ನಾಪತ್ತೆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಅಮಾನತುಗೊಂಡ ಕಾರ್ಯದರ್ಶಿಯ ಪಾತ್ರದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com