ಹಸಿರು ಕಬ್ಬು-ಜೋಳ ಬೆಳೆದ ಗದ್ದೆಯಲ್ಲಿ ಸುತ್ತಾಡಿ ಖಡಕ್ ರೊಟ್ಟಿ-ಪಲ್ಯ ಸವಿದ ಕೇಂದ್ರ ಸಚಿವ ಶೇಖಾವತ್: Video

ಬೆಳಗಾವಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಕಣ್ಣಿಗೆ ಹಾದಿ ಮಧ್ಯೆ ತೇಗೂರ ಗ್ರಾಮದ ರಸ್ತೆ ಬದಿಯಲ್ಲಿದ್ದ ಹಚ್ಚ ಹಸಿರಿನ ಕಬ್ಬು ಹಾಗೂ ಜೋಳದ ಬೆಳೆಗಳು ಬಿದ್ದಿವೆ.
Union Minister Gajendra Singh Shekhawat
ಹೊಲದಲ್ಲಿ ಕುಳಿತು ರೊಟ್ಟಿ ಸವಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್
Updated on

ಹುಬ್ಬಳ್ಳಿ-ಧಾರವಾಡ/ಬೆಳಗಾವಿ: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಸರಳತೆ ಮೂಲಕ ಸುದ್ದಿಯಾಗಿದ್ದಾರೆ. ಕಾರ್ಯನಿಮಿತ್ತ ನಿನ್ನೆ ಬೆಳಗಾವಿಗೆ ಆಗಮಿಸಿದ್ದ ಅವರು, ಮರಳಿ ಹೋಗುವ ಮಾರ್ಗಮಧ್ಯೆ ಕಾರು ನಿಲ್ಲಿಸಿ ರೈತರೊಬ್ಬರ ಜಮೀನಿನಲ್ಲಿ ಕುಳಿತು ಉತ್ತರ ಕರ್ನಾಟಕದ ಜವಾರಿ ಊಟ ಸವಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೊಲದಲ್ಲಿ ಸುತ್ತಾಡಿ ಆತ್ಮೀಯತೆ ತೋರಿದ ಸಚಿವರು

ಬೆಳಗಾವಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶೇಖಾವತ್ ಅವರ ಕಣ್ಣಿಗೆ ಹಾದಿ ಮಧ್ಯೆ ತೇಗೂರ ಗ್ರಾಮದ ರಸ್ತೆ ಬದಿಯಲ್ಲಿದ್ದ ಹಚ್ಚ ಹಸಿರಿನ ಕಬ್ಬು ಹಾಗೂ ಜೋಳದ ಬೆಳೆಗಳು ಬಿದ್ದಿವೆ. ತಕ್ಷಣವೇ ಬೆಂಗಾವಲು ವಾಹನಗಳನ್ನು ನಿಲ್ಲಿಸಿದ ಸಚಿವರು, ನೇರವಾಗಿ ಆ ಹೊಲದತ್ತ ಹೆಜ್ಜೆ ಹಾಕಿದ್ದಾರೆ. ಇದು ಸ್ಥಳೀಯ ರೈತ ಹಾಗೂ ಮಾಜಿ ಯೋಧ ರಮೇಶ ಗೋಕಾವಿ ಅವರ ಜಮೀನಾಗಿತ್ತು. ಇಂತಹ ಕಲ್ಲು-ಮಣ್ಣಿನ ಭೂಮಿಯಲ್ಲೂ ಇಷ್ಟೊಂದು ಅತ್ಯುತ್ತಮವಾಗಿ ಕೃಷಿ ನಿರ್ವಹಣೆ ಮಾಡಿದ್ದನ್ನು ಕಂಡು ನಿಬ್ಬೆರಗಾದ ಸಚಿವರು, ರೈತ ರಮೇಶ್ ಅವರಿಂದ ಬೆಳೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ನೆಲದ ಮೇಲೆ ಕುಳಿತು ರೊಟ್ಟಿ, ಚಟ್ನಿ ಸವಿದ ಸಚಿವರು!

ಹೊಲದಲ್ಲಿ ಸುತ್ತಾಡಿ ರೈತನ ಬೆನ್ನು ತಟ್ಟಿದ ಸಚಿವರಿಗೆ ಮಾಜಿ ಯೋಧ ರಮೇಶ್ ಗೋಕಾವಿ ಅವರು ಅತ್ಯಂತ ಪ್ರೀತಿ ಮತ್ತು ಒತ್ತಾಯದಿಂದ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಊಟ ಸವಿಯುವಂತೆ ಒತ್ತಾಯಿಸಿದರು. ಜಮೀನಲ್ಲಿ ನೆಲದ ಮೇಲೆ ಕುಳಿತ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರೈತರು ತಂದಿದ್ದ ಬಿಸಿ ಬಿಸಿ ರೊಟ್ಟಿ, ಪಲ್ಯ, ಮನೆಯಲ್ಲೇ ತಯಾರಿಸಿದ್ದ ಉಪ್ಪಿನಕಾಯಿ ಹಾಗೂ ಉತ್ತರ ಕರ್ನಾಟಕದ ಸ್ಪೆಷಲ್ ಒಣ ಕೆಂಪು ಮೆಣಸಿನಕಾಯಿ ಚಟ್ನಿಯನ್ನು ಬಾಯಿ ಚಪ್ಪರಿಸಿಕೊಂಡು ಸವಿದರು.

ಸಚಿವರ ಭಾವುಕ ಪೋಸ್ಟ್ ಮತ್ತು ಪ್ರಲ್ಹಾದ್ ಜೋಶಿ ಮೆಚ್ಚುಗೆ!

ಈ ಮರೆಯಲಾಗದ ಅನುಭವವನ್ನು ಸ್ವತಃ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಮೇತ ಹಂಚಿಕೊಂಡಿರುವ ಸಚಿವ ಶೇಖಾವತ್, "ಪ್ರೀತಿಯಿಂದ ಬಡಿಸಿದ ಆ ಸರಳ ಊಟದ ಹಳ್ಳಿಗಾಡಿನ ಸುವಾಸನೆ ನನ್ನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ಗ್ರಾಮೀಣ ಸಂಸ್ಕೃತಿಯ ಸರಳತೆಯೇ ಅದರ ನಿಜವಾದ ಶ್ರೇಷ್ಠತೆ. ಅನ್ನದಾತನಿಗೆ ಜಯವಾಗಲಿ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Union Minister Gajendra Singh Shekhawat
ಮದುವೆ ಮಂಟಪದಲ್ಲಿ ಚುಂಬಿಸಿಕೊಂಡ ವಧು-ವರ: ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ತರಹೇವಾರಿ ಕಮೆಂಟ್; Viral Video

ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತೇಗೂರ ಗ್ರಾಮದ ರೈತನ ಹೊಲದಲ್ಲಿ ಸಚಿವರು ಭೋಜನ ಸ್ವೀಕರಿಸಿದ್ದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. "ನಮ್ಮ ಜಿಲ್ಲೆಯ ರೈತರಿಗೆ ನೀಡಿದ ಈ ವಿಶೇಷ ಗೌರವ ಮತ್ತು ಆತ್ಮೀಯತೆಗೆ ನನ್ನ ಸಹೋದ್ಯೋಗಿ ಮಿತ್ರ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com