

ಬೆಂಗಳೂರು: ತನ್ನನ್ನು ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ. ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಈ ಕೃತ್ಯ ಎಸಗಿದ್ದಾನೆ. ಕೋಲಾರ ಮೂಲದ ಅಪ್ರಾಪ್ತೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಸೈಯದ್ ಆಕೆ ಜೊತೆ ಸುತ್ತಾಡಿಕೊಂಡಿದ್ದನು. ಈ ವಿಷಯ ತಿಳಿದು ಪೋಷಕರು ಇಬ್ಬರಿಗೂ 2025 ಜೂನ್ ನಲ್ಲಿ ಎಂಗೇಜ್ಮೆಂಟ್ ಮಾಡಿದ್ದರು.
ನಿಶ್ಚಿತಾರ್ಥವಾದ ನಂತರ ಸೈಯದ್ ಗೆ ಭಾವಿ ಪತ್ನಿ ಮೇಲೆ ಅನುಮಾನ ಮೂಡತೊಡಗಿದೆ. ಹೀಗಾಗಿ ಡಿಜೆ ಹಳ್ಳಿಯಿಂದ ಸ್ವಲ್ಪ ದೂರದ ಸಕ್ಕರೆ ಮಂಡಿಯಲ್ಲಿ ಸಂಬಂಧಿಕರ ಪಾಳು ಬಿದ್ದ ಜಾಗಕ್ಕೆ ಹುಡುಗಿಯನ್ನು ಕರೆಸಿಕೊಂಡಿದ್ದಾನೆ. ಆಕೆ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದಳು. ಎಷ್ಟೇ ಸಮಯ ಕಳೆದರೂ ಬಾಲಕಿ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಇಬ್ಬರೂ ಭೇಟಿಯಾಗುತ್ತಿದ್ದ ಜಾಗಕ್ಕೆ ಹೋಗಿ ನೋಡಿದಾಗ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತೆ ಶವ ಪತ್ತೆಯಾಗಿತ್ತು.
ಆಕೆಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು, ದೇಹದ ಮೇಲೆಲ್ಲ 17 ಬಾರಿ ಚುಚ್ಚಿ ಕ್ರೌರ್ಯ ಮೆರೆದಿದ್ದಾನೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement