

ಬೆಂಗಳೂರು: ಬೆಂಗಳೂರಿನಿಂದ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದರ್ಶನಕ್ಕಾಗಿ ಹೊರಟಿದ್ದ ಕುಟುಂಬವೊಂದು ದುರಂತ ಸಾವು ಕಂಡಿದೆ.
ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (Bengaluru National Highway) ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ದಂಪತಿ ಹಾಗೂ ಅವರ 4 ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪಲಮನೇರ್‌ನಿಂದ ಚಿತ್ತೂರಿಗೆ ಬರುತ್ತಿದ್ದ ಬಸ್ಸು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ನಿಂತಿತ್ತು. ಈ ವೇಳೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲೇ ಮೃತದೇಹಗಳು ಸಿಲುಕಿಕೊಂಡಿದ್ದವು. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಮೂಲಗಳ ಪ್ರಕಾರ, ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ವಾಸವಿದ್ದ ಕುಟುಂಬ ಇಂದು ಮಧ್ಯಾಹ್ನ 12 ಗಂಟೆಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಟಿಕೆಟ್ ಪಡೆದುಕೊಂಡಿತ್ತು. ಆದರೆ, ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಬಳಿಕ ಬಸ್‌ನ ಹಿಂಭಾಗಕ್ಕೆ ಸಿಲುಕಿಕೊಂಡಿದ್ದ ಕಾರನ್ನು ಪೊಲೀಸರು ಜೆಸಿಬಿ ಮೂಲಕ ಹೊರತೆಗೆದಿದ್ದಾರೆ.
Advertisement