

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ಮೂವತ್ತಾರು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಭದ್ರಾವತಿ ತಾಲ್ಲೂಕಿನ ವೀರಾಪುರ ಗ್ರಾಮದ ಕಾಗೆಹಳ್ಳ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಭದ್ರಾವತಿಗೆ ತೆರಳುತ್ತಿದ್ದ ಖಾಸಗಿ ಬಸ್, ಕಾಗೇಹಳ್ಳದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು, ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ.
ಅಪಘಾತದಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಒಟ್ಟು 36 ಜನ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರಲ್ಲಿ 25 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement