

ಬೆಂಗಳೂರು: ಕೆಲವರು ಬದುಕನ್ನು ಸಾಮಾನ್ಯವಾಗಿ ಸಾಗಿಸುತ್ತಾರೆ, ಆದರೆ, ಇನ್ನೂ ಕೆಲವರು ಜೀವನವನ್ನೇ ಒಂದು ಸವಾಲಾಗಿ ತೆಗೆದುಕೊಂಡು, ಅಸಾಧ್ಯವೆನಿಸುವ ಗುರಿಗಳನ್ನು ಸಾಧ್ಯವೆಂದು ಸಾಧಿಸಿ ತೋರಿಸುತ್ತಾರೆ. ಅಂತಹವರಲ್ಲಿ ಒಬ್ಬರು ಬೆಂಗಳೂರಿನ ಪ್ರಿಯಾಂಕಾ ಅಗರ್ವಾಲ್.
ಕಣ್ಣಿನ ಸಮಸ್ಯೆಯಿಂದಾಗಿ ದೃಷ್ಟಿ ಬಹುತೇಕ ಕಳೆದುಕೊಂಡಿದ್ದರೂ, ಪ್ರಿಯಾಂಕಾ ಅವರು ಇತ್ತೀಚೆಗೆ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದಿಂದ ಈ ಸಾಧನೆ ಮಾಡಿದ ಎರಡನೇ ಅಂಧ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಿಯಾಂಕಾ ಜನ್ಮದಿಂದಲೇ “ರೆಟಿನಿಟಿಸ್ ಪಿಗ್ಮೆಂಟೋಸಾ” ಎಂಬ ಜನ್ಮ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಕಣ್ಣುಗಳ ರೆಟಿನಾದ ಬೆಳಕನ್ನು ಸ್ವೀಕರಿಸುವ ಕೋಶಗಳನ್ನು ನಿಧಾನವಾಗಿ ಹಾಳು ಮಾಡುವ ಕಾಯಿಲೆಯಾಗಿದೆ. ಬಾಲ್ಯದಲ್ಲಿ ಸರಿಯಾಗಿ ಕಾಣುತ್ತಿದ್ದ ದೃಷ್ಟಿ, ಕಾಲೇಜು ಹಂತಕ್ಕೆ ಬಂದಾಗ ತುಂಬಾ ಕಡಿಮೆಯಾಗಿ, ಪತ್ರಿಕೆಯ ಶೀರ್ಷಿಕೆಗಳನ್ನಷ್ಟೇ ಓದಲು ಸಾಧ್ಯವಾಗುವ ಮಟ್ಟಕ್ಕೆ ದೃಷ್ಟಿ ಇಳಿದಿದೆ.
“ಹುಟ್ಟಿದಾಗ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಕಾಲೇಜಿಗೆ ಬಂದಾಗ ಓದಲು ಆಗದಂತಹ ಪರಿಸ್ಥಿತಿ ಎದುರಾಗಿತ್ತು. ನಂತರದಿಂದ ಸ್ಕ್ರೀನ್-ರೀಡರ್ ಸಾಫ್ಟ್‌ವೇರ್'ನ್ನು ಅವಲಂಬಿಸಬೇಕಾಯಿತು. ಈಗ ನನ್ನ ದೃಷ್ಟಿ ಕೇವಲ ಶೇ.10ರಷ್ಟು ಮಾತ್ರ ಇದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಪ್ರಿಯಾಂಕಾ ಅವರಿಗೆ ಪರ್ವತಾರೋಹಣದ ಆಸಕ್ತಿ ಅವರಿಗೆ ಸುಮಾರು 10 ವರ್ಷಗಳ ಹಿಂದೆ ಹುಟ್ಟಿತ್ತು. ಸುಮಾರು ಶೇ.65ರಷ್ಟು ದೃಷ್ಟಿ ಹೊಂದಿದ್ದಾಗ ಸ್ಕಂದಗಿರಿ ಟ್ರೆಕ್ ಮಾಡಿದ್ದರು. ಯಾವುದೇ ಅಧಿಕೃತ ತರಬೇತಿ ಇಲ್ಲದೇ, ಕೇವಲ ಒಬ್ಬ ಯುವತಿಯ ಎವರೆಸ್ಟ್ ಏರಿದ ಚಿತ್ರವನ್ನು ನೋಡಿದ ನಂತರ, ವಿಶೇಷವಾಗಿ ಕೋವಿಡ್ ಸಮಯದಲ್ಲಿ ಈ ಕನಸು ಅವರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತು.
ಅವರ ಈ ಕನಸಿಗೆ ದಾರಿದೀಪವಾದದ್ದು “ಇನ್‌ಕ್ಲೂಸಿವ್ ಇಂಡಿಯಾ ಫೌಂಡೇಶನ್”ನಲ್ಲಿ ಮಾಡಿದ ಸ್ವಯಂಸೇವಕ ಕಾರ್ಯ. ಅಲ್ಲಿ ಅವರು ತಿಂಕೇಶ್ ಕೌಶಿಕ್ ಅವರನ್ನು ಭೇಟಿ ಮಾಡಿದರು. ಅಂಗವೈಕಲ್ಯಗಳನ್ನು ಹೊಂದಿದ್ದರೂ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಮೊದಲ ವ್ಯಕ್ತಿಯಾದ ಟಿಂಕೇಶ್ ಆಗಿದ್ದರು, ಇವರು ಅಂಗವೈಕಲ್ಯ ಹೊಂದಿದವರಿಗೆ ಪರ್ವತಾರೋಹಣ ತರಬೇತಿ ನೀಡುತ್ತಿದ್ದಾರೆ. ಇವರೇ ಪ್ರಿಯಾಂಕಾ ಅವರಿಗೆ ಮಾರ್ಗದರ್ಶನ ನೀಡಿದ ವ್ಯಕ್ತಿಯಾಗಿದ್ದಾರೆ.
ಏಪ್ರಿಲ್ 5ರಂದು ಪತಿ ದಿಂಪೇಶ್ ಭಾಟೇವಾರಾ ಜೊತೆ ಪ್ರಯಾಣ ಆರಂಭಿಸಿದ ಪ್ರಿಯಾಂಕಾ, ಏಪ್ರಿಲ್ 14ರಂದು 5364 ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು. ಒಂಬತ್ತು ದಿನಗಳ ಈ ಪ್ರಯಾಣದಲ್ಲಿ ಕಠಿಣ ಬಂಡೆಗಳು, ಹಿಮಪಾತ, ಶೂನ್ಯಕ್ಕಿಂತ ಕಡಿಮೆ ತಾಪಮಾನ ಎಲ್ಲವೂ ಸವಾಲುಗಳಾಗಿದ್ದವು.
“ನನ್ನ ಗೈಡ್‌ಗೆ ಅಂಧ ವ್ಯಕ್ತಿಗೆ ಹೇಗೆ ಮಾರ್ಗದರ್ಶನ ಮಾಡಬೇಕು ಎಂಬ ತರಬೇತಿ ಇರಲಿಲ್ಲ. ಹೀಗಾಗಿ ಹಲವೆಡೆ ಅಸಾಧ್ಯವಾದ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ದಾರಿಯುದ್ದಕೂ ಅನೇಕ ಬಂಡೆಗಳಿದ್ದವು. ಇದು ಸವಾಲಾಗಿ ಪರಿಣಮಿಸಿತ್ತು ಎಂದು ತಿಳಿಸಿದ್ದಾರೆ.
ಹತ್ತಿರ ನಿಂತವರನ್ನೇ ಸ್ಪಷ್ಟವಾಗಿ ಕಾಣದ ಸ್ಥಿತಿಯಲ್ಲಿದ್ದರೂ, ಪ್ರಿಯಾಂಕಾ ಎತ್ತರದ ಪರ್ವತದ ಸವಾಲನ್ನು ಧೈರ್ಯದಿಂದ ಎದುರಿಸಿದ್ದಾರೆ. ಪ್ರಿಯಾಂಕಾ ಅಗರ್ವಾಲ್ ಅವರ ಈ ಸಾಧನೆ ಕೇವಲ ಪರ್ವತಾರೋಹಣವಲ್ಲ. ಕತ್ತಲೆಯನ್ನೂ ದಾಟಿ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
Advertisement