

ಬೆಂಗಳೂರು: ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಆತಂಕ ಹೆಚ್ಚಾಗಿದ್ದು, ಈ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಐಟಿ ರಾಜಧಾನಿಯಾಗಿ ಬೆಳೆದಿರುವ ಬೆಂಗಳೂರಿನಲ್ಲಿ ಈಗಾಗಲೇ “ಹೀಟ್ ಐಲ್ಯಾಂಡ್” ಪರಿಣಾಮ ತೀವ್ರವಾಗಿದ್ದು, AI ಡೇಟಾ ಸೆಂಟರ್‌ಗಳ ಹೆಚ್ಚಳದಿಂದ ಅದು ಇನ್ನಷ್ಟು ಗಂಭೀರವಾಗುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಸಾಮಾನ್ಯ ಹವಾಮಾನ ಹೆಚ್ಚಾಗುತ್ತಿವೆ. ಭಾರೀ ಗುಡುಗು-ಮಿಂಚು, ತೀವ್ರ ಮಳೆ, ಆಲಿಕಲ್ಲು ಮಳೆ, ಉಷ್ಣಾಂಶದ ಏರಿಕೆ ಮತ್ತು ಅಸ್ಥಿರ ಹವಾಮಾನ ಮಾದರಿಗಳು ಜನರನ್ನು ಕಂಗೆಡಿಸುತ್ತಿವೆ.
ತಜ್ಞರ ಪ್ರಕಾರ, ನಗರದಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ಕಟ್ಟಡಗಳು, ವಾಹನಗಳ ಪ್ರಮಾಣ, ಹಸಿರು ಪ್ರದೇಶಗಳ ಕುಸಿತದ ಜೊತೆಗೆ ಈಗ ಡೇಟಾ ಸೆಂಟರ್‌ಗಳ ಹೆಚ್ಚಳ “ಹೀಟ್ ಐಲ್ಯಾಂಡ್” ಪರಿಣಾಮವನ್ನು ತೀವ್ರಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ಪ್ರಸ್ತುತ 31 ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಎರಡು ಹೊಸ ಸೆಂಟರ್‌ಗಳು ನಿರ್ಮಾಣ ಹಂತದಲ್ಲಿವೆ.
ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಬೆಂಗಳೂರು ಹೊರತಾಗಿ ಮಂಗಳೂರಿನಲ್ಲಿ ಮಾತ್ರ ಒಂದು ಡೇಟಾ ಸೆಂಟರ್ ಇದೆ. AI ತಂತ್ರಜ್ಞಾನ ವೇಗವಾಗಿ ವಿಸ್ತಾರವಾಗುತ್ತಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಡೇಟಾ ಸೆಂಟರ್‌ಗಳು ನಿರ್ಮಾಣವಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.
AI ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸಲು ಅಪಾರ ಪ್ರಮಾಣದ ವಿದ್ಯುತ್ ಹಾಗೂ ನೀರಿನ ಅಗತ್ಯವಿರುತ್ತದೆ. ಸಾವಿರಾರು ಸರ್ವರ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುವುದರಿಂದ ಭಾರೀ ಪ್ರಮಾಣದ ಉಷ್ಣ ಉತ್ಪತ್ತಿಯಾಗುತ್ತದೆ.
ಈ ಸರ್ವರ್‌ಗಳನ್ನು ತಂಪಾಗಿಡಲು ಅತ್ಯಾಧುನಿಕ ಕೂಲಿಂಗ್ ವ್ಯವಸ್ಥೆಗಳನ್ನು ಬಳಸಲಾಗುತ್ತದೆ. ಅದಕ್ಕಾಗಿ ದಿನದ 24 ಗಂಟೆಯೂ ನೀರು ಮತ್ತು ವಿದ್ಯುತ್ ಬೇಕಾಗುತ್ತದೆ.
ಜಾಗತಿಕ ಅಂಕಿಅಂಶಗಳ ಪ್ರಕಾರ, ಒಂದು ಮೆಗಾವಾಟ್ ಸಾಮರ್ಥ್ಯದ AI ಡೇಟಾ ಸೆಂಟರ್ ವರ್ಷಕ್ಕೆ ಸರಾಸರಿ 2.5 ಕೋಟಿ ಲೀಟರ್ ನೀರನ್ನು ಬಳಸುತ್ತದೆ. ವಿದ್ಯುತ್ ಬಳಕೆ ಕೂಡ ಅಪಾರವಾಗಿದೆ.
ಒಂದು ಡೇಟಾ ಸೆಂಟರ್ ಪೂರ್ಣ ಪ್ರಮಾಣದಲ್ಲಿ 1 ಮೆಗಾವಾಟ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದರೆ ಪ್ರತಿ ಗಂಟೆಗೆ ಸುಮಾರು 1,000 ಯೂನಿಟ್ ವಿದ್ಯುತ್ ಬಳಸುತ್ತದೆ. ಅಂದರೆ, ದಿನಕ್ಕೆ 24,000 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ. ಪರಿಸರ ಹೋರಾಟಗಾರರು ಮತ್ತು ವಿಜ್ಞಾನಿಗಳು ಇನ್ನು ಗಂಭೀರ ಎಚ್ಚರಿಕೆಯಾಗಿ ಪರಿಗಣಿಸುತ್ತಿದ್ದಾರೆ.
ಇಕೋ-ವಾಚ್ ನಿರ್ದೇಶಕ ಅಕ್ಷಯ್ ಹೆಬ್ಳೀಕರ್ ಮಾತನಾಡಿ, “AI ಡೇಟಾ ಸೆಂಟರ್‌ಗಳು ಕೇವಲ ವಿದ್ಯುತ್ ಮತ್ತು ನೀರನ್ನಷ್ಟೇ ಬಳಸುವುದಿಲ್ಲ, ಅವುಗಳಿಂದ ಉತ್ಪತ್ತಿಯಾಗುವ ಎಲೆಕ್ಟ್ರಾನಿಕ್ ತ್ಯಾಜ್ಯವೂ ದೊಡ್ಡ ಸಮಸ್ಯೆ. ಅದರ ಒಂದು ಭಾಗವನ್ನು ಮರುಬಳಕೆ ಮಾಡಬಹುದಾದರೂ ಅದಕ್ಕೂ ಹೆಚ್ಚಿನ ನೈಸರ್ಗಿಕ ಸಂಪನ್ಮೂಲ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸರ್ಕಾರಕ್ಕೆ ವಿಶೇಷ ನೀತಿ ರೂಪಿಸುವಂತೆ ಸಲಹೆ ನೀಡಿರುವ ಅವರು, “ಎಲ್ಲ ಕ್ಷೇತ್ರಗಳಿಗೂ ಅನಿಯಂತ್ರಿತ AI ಬಳಕೆ ಅಗತ್ಯವಿಲ್ಲ. ಅಗತ್ಯವಿರುವ ಪ್ರಮುಖ ಕ್ಷೇತ್ರಗಳಿಗೆ ಮಾತ್ರ AI ಬಳಕೆಯನ್ನು ಮಿತಿಗೊಳಿಸುವ ಕುರಿತು ಸರ್ಕಾರ ಚಿಂತಿಸಬೇಕು ಎಂದು ತಿಳಿಸಿದ್ದಾರೆ.
ಅಲಯನ್ಸ್ ವಿಶ್ವವಿದ್ಯಾಲಯದ ನೈಸರ್ಗಿಕ ಪರಿಹಾರಗಳ ಕೇಂದ್ರದ ಮುಖ್ಯಸ್ಥ ಮಿಥುನ್ ಹನುಮೇಶ್ ಅವರು ಮಾತನಾಡಿ, ಬೆಂಗಳೂರಿನ ನೀರಿನ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ನಗರ ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡೇಟಾ ಸೆಂಟರ್‌ಗಳು ದಿನಕ್ಕೆ ಕೋಟ್ಯಾಂತರ ಲೀಟರ್ ನೀರನ್ನು ಬಳಸಿದರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು ಎಂದು ಹೇಳಿದ್ದಾರೆ.
ಅನೇಕ ದೇಶಗಳಲ್ಲಿ ಡೇಟಾ ಸೆಂಟರ್‌ಗಳನ್ನು ಕಡಲ ತೀರ ಪ್ರದೇಶಗಳು, ತಂಪಾದ ಹವಾಮಾನ ಇರುವ ಪ್ರದೇಶಗಳು ಹಾಗೂ ನವೀಕರಿಸಬಹುದಾದ ಇಂಧನ ಸೌಲಭ್ಯಗಳಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಕೂಲಿಂಗ್ ವೆಚ್ಚ ಹಾಗೂ ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
AI ಕ್ಷೇತ್ರದ ಮತ್ತೊಬ್ಬ ತಜ್ಞರು ಮಾತನಾಡಿ, ಚಾಟ್‌ಬಾಟ್‌ಗಳು, ಚಿತ್ರ ನಿರ್ಮಾಣ, ಧ್ವನಿ ತಂತ್ರಜ್ಞಾನ, ಡೇಟಾ ವಿಶ್ಲೇಷಣೆ ಮುಂತಾದ ಸೇವೆಗಳು ವೇಗವಾಗಿ ಬೆಳೆಯುತ್ತಿರುವುದರಿಂದ ಬ್ಯಾಟರಿ, ಸರ್ವರ್, ಉಪಗ್ರಹ ಹಾಗೂ ಬಾಹ್ಯಾಕಾಶ ಮೂಲಸೌಕರ್ಯಗಳ ಮೇಲೂ ಒತ್ತಡ ಹೆಚ್ಚುತ್ತಿದೆ. ಇವುಗಳಲ್ಲಿ ಬಳಸುವ ಬಹುತೇಕ ವಸ್ತುಗಳು ಜೈವಿಕವಾಗಿ ಕರಗದವುಗಳಾಗಿದ್ದು, ಅವುಗಳ ತ್ಯಾಜ್ಯ ನಿರ್ವಹಣೆಯೂ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ AI ಬಳಕೆಯ ಪರಿಸರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.
ಚಾಟ್‌ಜಿಪಿಟಿಗೆ ಕೇವಲ ಐದು ಪ್ರಶ್ನೆ ಕೇಳಿದರೂ ಸುಮಾರು 500 ಮಿಲಿ ನೀರು ಬಳಸಲಾಗುತ್ತದೆ. ಈಗ ಲಕ್ಷಾಂತರ ಜನ AI ಬಳಸುತ್ತಿದ್ದಾರೆ. ಹೀಗಾಗಿ ಇದರ ಒಟ್ಟು ನೀರಿನ ಬಳಕೆ ಎಷ್ಟಿರಬಹುದು ಎಂಬುದನ್ನು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದ್ದರು. ಅಲ್ಲದೆ, ಡೇಟಾ ಸೆಂಟರ್‌ಗಳಿಗೆ ಸಂಬಂಧಿಸಿದಂತೆ ಸುಸ್ಥಿರ ಮತ್ತು ಪರಿಸರ ಸ್ನೇಹಿ ನೀತಿ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು.
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್, ಅವರು ಮಾತನಾಡಿ, “ಡೇಟಾ ಸೆಂಟರ್‌ಗಳು ಅನಿವಾರ್ಯ. ಆದರೆ, ಹೊಸ ನೀತಿಯಲ್ಲಿ ನೀರು ಮತ್ತು ವಿದ್ಯುತ್ ಸಮರ್ಥ ಬಳಕೆ, ಶಾಖ ಹೊರಸೂಸುವಿಕೆ ನಿಯಂತ್ರಣ ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಈಗಾಗಲೇ ಟ್ರಾಫಿಕ್, ನೀರಿನ ಕೊರತೆ, ವಾಯುಮಾಲಿನ್ಯ ಮತ್ತು ಉಷ್ಣಾಂಶ ಏರಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ನಡುವೆ AI ಡೇಟಾ ಸೆಂಟರ್‌ಗಳ ವೇಗದ ವಿಸ್ತರಣೆ ನಗರ ಪರಿಸರ ಸಮತೋಲನಕ್ಕೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗುತ್ತಿದೆ.
ಡೇಟಾ ಸೆಂಟರ್ ಎಂದರೇನು?
ಡೇಟಾ ಸೆಂಟರ್ ಎಂದರೆ ಅತಿ ದೊಡ್ಡ ಗಣಕ ಶಕ್ತಿ (Computational Power) ಹೊಂದಿರುವ ವಿಶೇಷ ತಾಂತ್ರಿಕ ಕೇಂದ್ರ. ಕೃತಕ ಬುದ್ಧಿಮತ್ತೆ (AI) ಹಾಗೂ ಮೆಷಿನ್ ಲರ್ನಿಂಗ್ (Machine Learning) ಮಾದರಿಗಳನ್ನು ತರಬೇತಿ ನೀಡಲು ಮತ್ತು ಕಾರ್ಯಗತಗೊಳಿಸಲು ಇವುಗಳನ್ನು ಬಳಸಲಾಗುತ್ತದೆ. ವೇಗವಾಗಿ ಡೇಟಾ ಸಂಸ್ಕರಣೆ (Data Processing) ಮತ್ತು ವಿಶ್ಲೇಷಣೆ (Analysis) ಮಾಡಲು ಈ ಕೇಂದ್ರಗಳನ್ನು ವಿನ್ಯಾಸಗೊಳಿಸಲಾಗುತ್ತದೆ.
ಡೇಟಾ ಸೆಂಟರ್‌ಗಳು ಎಷ್ಟು ವಿದ್ಯುತ್ ಬಳಕೆ ಮಾಡುತ್ತವೆ?
ಒಂದು ಡೇಟಾ ಸೆಂಟರ್ ಪೂರ್ಣ ಪ್ರಮಾಣದಲ್ಲಿ 1 ಮೆಗಾವಾಟ್ (1 MW = 1,000 ಕಿಲೋವಾಟ್) ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದರೆ, ಅದು ಪ್ರತಿ ಗಂಟೆಗೆ ಸುಮಾರು 1,000 ಯೂನಿಟ್ ವಿದ್ಯುತ್ ಬಳಸುತ್ತದೆ. (1 ಯೂನಿಟ್ = 1 ಕಿಲೋವಾಟ್ ಅವರ್ ಅಥವಾ kWh) ಅಂದರೆ, 1,000 kWh × 24 ಗಂಟೆ = ದಿನಕ್ಕೆ 24,000 ಯೂನಿಟ್ ವಿದ್ಯುತ್ ಬಳಕೆ ಆಗುತ್ತದೆ.
Advertisement