ದೇಶದ ಆರ್ಥಿಕತೆಗೆ ಬಲ: ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ; ಗ್ರಾಮೀಣ ಪ್ರದೇಶದಲ್ಲಿ ಶೇ.4.2, ನಗರದಲ್ಲಿ ಶೇ.6.7ಕ್ಕೆ ಕುಸಿತ..!

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ.5.2ರಿಂದ ಶೇ.4.9ಕ್ಕೆ ಇಳಿದಿದೆ. ಅಂದರೆ, ಶೇ.0.3ರಷ್ಟು ಅಂಕಗಳ ಕುಸಿತ ದಾಖಲಾಗಿದೆ.
File photo
ಸಂಗ್ರಹ ಚಿತ್ರonline desk
Updated on: 

ನವದೆಹಲಿ: ದೇಶದ ಒಟ್ಟಾರೆ ನಿರುದ್ಯೋಗ ಪ್ರಮಾಣ ಸೆಪ್ಟೆಂಬರ್‌ನಲ್ಲಿದ್ದ ಶೇ.5ರಿಂದ ಅಕ್ಟೋಬರ್‌ನಲ್ಲಿ ಶೇ.4.9ಕ್ಕೆ ಇಳಿಕೆಯಾಗಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಇತ್ತೀಚಿನ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್) ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಗ್ರಾಮೀಣ ಪ್ರದೇಶಗಳ ನಿರುದ್ಯೋಗ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗದೆ ಶೇ.4.2ರಲ್ಲೇ ಮುಂದುವರಿದಿದೆ. ಆದರೆ, ನಗರ ಪ್ರದೇಶಗಳ ನಿರುದ್ಯೋಗ ಪ್ರಮಾಣ ಸೆಪ್ಟೆಂಬರ್‌ನಲ್ಲಿದ್ದ ಶೇ.6.9ರಿಂದ ಅಕ್ಟೋಬರ್‌ನಲ್ಲಿ ಶೇ.6.7ಕ್ಕೆ ಇಳಿಕೆಯಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ.5.2ರಿಂದ ಶೇ.4.9ಕ್ಕೆ ಇಳಿದಿದೆ. ಅಂದರೆ, ಶೇ.0.3ರಷ್ಟು ಅಂಕಗಳ ಕುಸಿತ ದಾಖಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.4.4ರಿಂದ ಶೇ.4.2ಕ್ಕೆ ಹಾಗೂ ನಗರ ಪ್ರದೇಶಗಳಲ್ಲಿ ಶೇ.7ರಿಂದ ಶೇ.6.7ಕ್ಕೆ ನಿರುದ್ಯೋಗ ಪ್ರಮಾಣ ಇಳಿಕೆಯಾಗಿದೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಪರಿಗಣಿಸಿದಾಗ, ಪುರುಷರ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ.4.9ರಲ್ಲೇ ಸ್ಥಿರವಾಗಿದೆ. ನಗರ ಪ್ರದೇಶದ ಪುರುಷರ ನಿರುದ್ಯೋಗ ಪ್ರಮಾಣವೂ ಶೇ.6ರಲ್ಲೇ ಮುಂದುವರಿದಿದೆ. ಆದರೆ, ಗ್ರಾಮೀಣ ಪ್ರದೇಶದ ಪುರುಷರ ನಿರುದ್ಯೋಗ ಪ್ರಮಾಣ ಸೆಪ್ಟೆಂಬರ್‌ನಲ್ಲಿದ್ದ ಶೇ.4.4ರಿಂದ ಅಕ್ಟೋಬರ್‌ನಲ್ಲಿ ಶೇ.4.3ಕ್ಕೆ ಇಳಿಕೆಯಾಗಿದೆ.

File photo
40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

ಇದೇ ವೇಳೆ ಮಹಿಳೆಯರ ನಿರುದ್ಯೋಗ ಪ್ರಮಾಣದಲ್ಲಿಯೂ ಇಳಿಕೆ ಕಂಡುಬಂದಿದೆ. ದೇಶದ ಒಟ್ಟಾರೆ ಮಹಿಳಾ ನಿರುದ್ಯೋಗ ಪ್ರಮಾಣ ಸೆಪ್ಟೆಂಬರ್‌ನಲ್ಲಿದ್ದ ಶೇ.5.2ರಿಂದ ಅಕ್ಟೋಬರ್‌ನಲ್ಲಿ ಶೇ.5ಕ್ಕೆ ಇಳಿದಿದೆ. ಗ್ರಾಮೀಣ ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ.3.9ರಿಂದ ಶೇ.3.8ಕ್ಕೆ ಕುಸಿದಿದ್ದರೆ, ನಗರ ಪ್ರದೇಶದ ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ.9.2ರಿಂದ ಶೇ.8.7ಕ್ಕೆ ಇಳಿಕೆಯಾಗಿದೆ.

ಇದೇ ವೇಳೆ, ದೇಶದ ಒಟ್ಟಾರೆ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ಪ್ರಮಾಣವೂ (ಎಲ್‌ಎಫ್‌ಪಿಆರ್) ಸ್ವಲ್ಪ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಶೇ.55.5ರಷ್ಟಿದ್ದ ಈ ಪ್ರಮಾಣ ಅಕ್ಟೋಬರ್‌ನಲ್ಲಿ ಶೇ.55.7ಕ್ಕೆ ತಲುಪಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ಪ್ರಮಾಣ ಶೇ.58ರಿಂದ ಶೇ.58.4ಕ್ಕೆ ಏರಿಕೆಯಾಗಿದೆ.

ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ಪ್ರಮಾಣವು ಉದ್ಯೋಗದಲ್ಲಿರುವವರು ಹಾಗೂ ಉದ್ಯೋಗ ಹುಡುಕುತ್ತಿರುವವರ ಒಟ್ಟು ಪ್ರಮಾಣವನ್ನು ಸೂಚಿಸುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಈ ಅಂಕಿಅಂಶ ಪ್ರಮುಖವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X