KPSC ನೇಮಕಾತಿ ಹಗರಣ: ರೋಲ್ ನಂಬರ್ ನೋಡಿ ಪ್ರಶ್ನೆ ಪತ್ರಿಕೆ ಸರಣಿ ಮ್ಯಾಚ್ ಮಾಡ್ತಿದ್ದ ಮಾಸ್ಟರ್ ಮೈಂಡ್ ಗಂಗ್ವಾರ್; ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು..!

ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಗಂಗ್ವಾರ್ ಅವರು ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಆಯಾ ಪ್ರಶ್ನೆಪತ್ರಿಕೆ ಸರಣಿಯ ವಿವರಗಳೊಂದಿಗೆ ತಾಳೆ ಹಾಕಿ, ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ಕೆಪಿಎಸ್‌ಸಿಯ ಮಾಜಿ ಸದಸ್ಯೆ ಬಿ.ವಿ. ಗೀತಾ ಅವರಿಗೆ ಒದಗಿಸಿದ್ದರು.
IAS officer Gangwar
ಜ್ಞಾನೇಂದ್ರ ಕುಮಾರ್ ಗಂಗ್ವಾರ್
Updated on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ತಮಗೆ ಸಿಗುತ್ತಿದ್ದ ಗೌಪ್ಯ ಆಸನ ವ್ಯವಸ್ಥೆಯ ತಾಂತ್ರಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಅಭ್ಯರ್ಥಿಗಳ ರೋಲ್ ನಂಬರ್‌ಗಳನ್ನು ಪ್ರಶ್ನೆ ಪತ್ರಿಕೆಯ ಸರಣಿಯೊಂದಿಗೆ (Paper Series) ಮ್ಯಾಚ್ ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಿಂದ ತಿಳಿದುಬಂದಿದೆ.

ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಗಂಗ್ವಾರ್ ಅವರು ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಆಯಾ ಪ್ರಶ್ನೆಪತ್ರಿಕೆ ಸರಣಿಯ ವಿವರಗಳೊಂದಿಗೆ ತಾಳೆ ಹಾಕಿ, ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ಕೆಪಿಎಸ್‌ಸಿಯ ಮಾಜಿ ಸದಸ್ಯೆ ಬಿ.ವಿ. ಗೀತಾ ಅವರಿಗೆ ಒದಗಿಸಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಗೌಪ್ಯವಾಗಿ ಇರಿಸಲಾಗಿದ್ದ ಪ್ರಶ್ನೆಪತ್ರಿಕೆಗಳ ಸರಣಿ ಮತ್ತು ಉತ್ತರ ಕೀಗಳ ಪಟ್ಟಿಯ ಜತೆಗೆ ಅಭ್ಯರ್ಥಿಗಳ ಆಸನ ವ್ಯವಸ್ಥೆಯ ವಿವರಗಳು ಪರೀಕ್ಷಾ ನಿಯಂತ್ರಕರಿಗೆ ಮಾತ್ರ ಲಭ್ಯವಿದ್ದವು.

ಉದಾಹರಣೆಗೆ, ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರಿಗೆ ಸಾಮಾನ್ಯ ಪತ್ರಿಕೆಗೆ ‘ಬಿ’ ಸರಣಿ ಹಾಗೂ ನಿರ್ದಿಷ್ಟ ಪತ್ರಿಕೆಗೆ ‘ಕ್ಯೂ’ ಸರಣಿ ಹಂಚಿಕೆಯಾಗಿತ್ತು. ಡಾ. ನಂದೀಶ್ ಬಿ. ಭದ್ದರ್ಗಟ್ಟೆ ಅವರಿಗೆ ಕ್ರಮವಾಗಿ ‘ಡಿ’ ಮತ್ತು ‘ಎಸ್’ ಸರಣಿಗಳನ್ನು ನೀಡಲಾಗಿತ್ತು.

ಪರೀಕ್ಷೆಗೆ ಒಂದು ದಿನ ಮೊದಲು ಗೀತಾ ಅವರು ತಮ್ಮನ್ನು ಸಂಪರ್ಕಿಸಿ, ಪಶುವೈದ್ಯಾಧಿಕಾರಿ ಹುದ್ದೆಗೆ ಪರೀಕ್ಷೆ ಬರೆಯುತ್ತಿದ್ದ ಆರು ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ನೀಡಿ, ಅವರಿಗೆ ಹಂಚಿಕೆಯಾಗಿದ್ದ ಪ್ರಶ್ನೆಪತ್ರಿಕೆ ಸರಣಿಗಳಿಗೆ ಅನುಗುಣವಾದ ಉತ್ತರ ಕೀಗಳನ್ನು ಕೇಳಿದ್ದರು ಎಂದು ಗಂಗ್ವಾರ್ ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

IAS officer Gangwar
ಪಶುವೈದ್ಯಾಧಿಕಾರಿ ಪರೀಕ್ಷೆ: ಲಂಚಕ್ಕಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ IAS ಅಧಿಕಾರಿ; ಪರೀಕ್ಷಾರ್ಥಿಗಳಿಂದ 30-40 ಲಕ್ಷ ರೂ ಸಂಗ್ರಹ- ED ಆರೋಪ!

ಗಂಗ್ವಾರ್ ಅವರು ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪ್ರಶ್ನೆಪತ್ರಿಕೆ ಸರಣಿಯ ವಿವರಗಳೊಂದಿಗೆ ತಾಳೆ ಹಾಕಿ, ಮೊದಲ 80 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಒದಗಿಸಿದ್ದರು ಎನ್ನಲಾಗಿದೆ.

ಗೀತಾ ಅವರು ಈ ಉತ್ತರಗಳನ್ನು ಅಭ್ಯರ್ಥಿಗಳಿಗೆ ತಲುಪಿಸಿದ್ದರು. ಈ ಆರು ಅಭ್ಯರ್ಥಿಗಳು ಬಳಿಕ ಹುದ್ದೆಗೆ ಆಯ್ಕೆಯಾಗಿದ್ದು, ಉತ್ತರಗಳನ್ನು ಒದಗಿಸಲು ಲಂಚ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.

ಆರು ಅಭ್ಯರ್ಥಿಗಳನ್ನು ಡಾ. ನಂದೀಶ್ ಬಿ. ಭದ್ದರ್ಗಟ್ಟೆ, ಡಾ. ಸೂಗುರೇಶ್ ಜಕಾ, ಡಾ. ಕಿರಣ್ ಕುಮಾರ್ ಎಂ., ಡಾ. ತೇಜಸ್ ಎಸ್.ಎಸ್., ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಮತ್ತು ಡಾ. ನವೀನ್ ಕುಮಾರ್ ಎನ್. ಎಂದು ಗುರುತಿಸಲಾಗಿದೆ.

ಕೆಪಿಎಸ್‌ಸಿಯ ಕೆಲವು ಸದಸ್ಯರು ಮತ್ತು ಅಧಿಕಾರಿಗಳು ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಂದ ಲಂಚ ಪಡೆಯಲು ಗೌಪ್ಯವಾದ 1:3 ಅರ್ಹತಾ ಪಟ್ಟಿಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುದನ್ನೂ ಇ.ಡಿ. ತನಿಖೆ ಬಹಿರಂಗಪಡಿಸಿದೆ. ಆಯ್ಕೆಯಾಗುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಕೆಪಿಎಸ್‌ಸಿ ಅಧಿಕಾರಿಯೊಬ್ಬರಾದ ಗಂಗ್ವಾರ್ ಅವರಿಂದ ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸಿದ ಅಧಿಕಾರಿಗಳು, ಪರೀಕ್ಷಾ ನಿಯಂತ್ರಕರ ಕಚೇರಿಯಲ್ಲಿದ್ದ ಅಭ್ಯರ್ಥಿಗಳ ಗೌಪ್ಯ ಅರ್ಹತಾ ಸ್ಥಾನಗಳ ಮಾಹಿತಿಯನ್ನು ಅಧಿಕಾರಿಗಳು ಬಳಸಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ.

ಅಂತಿಮ ಆಯ್ಕೆಯಲ್ಲಿ ಅಭ್ಯರ್ಥಿಗಳಿಗೆ ಅವಕಾಶ ಎಷ್ಟಿದೆ ಎಂಬುದನ್ನು ಈ ಮಾಹಿತಿಯ ಆಧಾರದ ಮೇಲೆ ಅಂದಾಜಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸಾಮಾನ್ಯವಾಗಿ ಕೆಪಿಎಸ್‌ಸಿ 1:3 ಅರ್ಹತಾ ಪಟ್ಟಿಯನ್ನು ಪ್ರಕಟಿಸುವಾಗ ಅಭ್ಯರ್ಥಿಗಳ ವೈಯಕ್ತಿಕ ಅಂಕಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಅಧಿಕಾರಿಗಳು ಗೌಪ್ಯ ಮಾಹಿತಿಯನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಸಂಪರ್ಕಿಸಿ, ನೇಮಕಾತಿಯಲ್ಲಿ ಆಯ್ಕೆಯಾಗುವ ಭರವಸೆ ನೀಡುತ್ತಿದ್ದರು ಎನ್ನಲಾಗಿದೆ.

ಹುದ್ದೆಯ ಸ್ವರೂಪ ಮತ್ತು ಹಂತಕ್ಕೆ ಅನುಗುಣವಾಗಿ ಅಭ್ಯರ್ಥಿಗಳಿಂದ 10 ಲಕ್ಷ ರೂ.ಗಳಿಂದ 50 ಲಕ್ಷ ರೂ.ವರೆಗೆ ಲಂಚಕ್ಕೆ ಬೇಡಿಕೆ ಇಡಲಾಗುತ್ತಿತ್ತು ಎಂದು ಇ.ಡಿ. ತನಿಖೆಯಲ್ಲಿ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com