

ಬೆಂಗಳೂರು: ವಯಸ್ಸಿನ ಮಿತಿ ಹಾಗೂ ನಿವೃತ್ತಿಯ ನಂತರವೂ ಆರ್ಥಿಕ ಸ್ವಾವಲಂಬನೆ ಮತ್ತು ಗೌರವದ ಬದುಕು ಕಟ್ಟಿಕೊಳ್ಳಬಯಸುವ ಹಿರಿಯ ನಾಗರಿಕರಿಗಾಗಿ ನಗರದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವು ಅಭೂತಪೂರ್ವ ಯಶಸ್ಸು ಕಂಡಿದೆ.
11ನೇ ಆವೃತ್ತಿಯ 'ಜಾಬ್ಸ್ 60+' (Jobs 60+) ಉದ್ಯೋಗ ಮೇಳದಲ್ಲಿ 83 ಹಿರಿಯ ನಾಗರಿಕರು ಸ್ಥಳದಲ್ಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇದಲ್ಲದೆ ವಿವಿಧ ಹುದ್ದೆಗಳಿಗೆ ಇನ್ನೂ 457 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ನೈಟಿಂಗೇಲ್ಸ್ ಎಂಪವರ್‌ಮೆಂಟ್ ಫೌಂಡೇಶನ್, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.
ಉದ್ಯೋಗ ಮೇಳದಲ್ಲಿ 700ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, 62 ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಿದ್ದವು. ಒಟ್ಟು 987 ಉದ್ಯೋಗಾವಕಾಶಗಳನ್ನು ಒದಗಿಸಿದ್ದವು. ಆಡಳಿತ, ಹಣಕಾಸು, ಮಾರಾಟ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ಹೆಚ್ಚಿನ ಹುದ್ದೆಗಳು ಲಭ್ಯವಿದ್ದವು. ನೇಮಕಾತಿ ಪ್ರಕ್ರಿಯೆಯಲ್ಲಿ ವಯಸ್ಸಿನ ಕಾರಣದಿಂದ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, 55ರಿಂದ 70 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ನೋಂದಣಿ ಮತ್ತು ಸಮಾಲೋಚನೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರ ಹಿಂದಿನ ಉದ್ಯೋಗದ ಅನುಭವ, ಕೌಶಲಗಳು ಹಾಗೂ ಉದ್ಯೋಗದ ಆದ್ಯತೆಗಳ ಬಗ್ಗೆ ಮಾಹಿತಿ ಪಡೆದು, ಸೂಕ್ತ ಉದ್ಯೋಗದಾತರ ಬಳಿ ಕಳುಹಿಸಲಾಯಿತು. ನೇಮಕಾತಿದಾರರು ಆಯಾ ಹುದ್ದೆಗಳಿಗೆ ಅಗತ್ಯವಿರುವ ಅರ್ಹತೆ ಮತ್ತು ಕೌಶಲಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಿದರು.
ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ಸಂದರ್ಶನ ಎದುರಿಸಲು ಮೂರು ಆಯ್ಕೆಗಳನ್ನು ನೀಡಲಾಗಿತ್ತು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಿವೃತ್ತ ಮೇಲ್ವಿಚಾರಕರೊಬ್ಬರು ಸ್ನೇಹಿತರ ಮೂಲಕ ಉದ್ಯೋಗ ಮೇಳದ ಬಗ್ಗೆ ತಿಳಿದು ಮೊದಲ ಬಾರಿಗೆ ಭಾಗವಹಿಸಿದ್ದರು.
ಅವರು ತಮ್ಮ ರೆಸ್ಯೂಮ್ ಇಲ್ಲದೆಯೇ ಮೇಳಕ್ಕೆ ಬಂದಿದ್ದರೂ, ಅವರನ್ನು ಸಮಾಲೋಚನೆ ವಿಭಾಗಕ್ಕೆ ಕಳುಹಿಸಲಾಯಿತು. ಇದರಿಂದ ಮೊದಲ ಬಾರಿಗೆ ಭಾಗವಹಿಸುವವರಿಗೂ ಪ್ರಕ್ರಿಯೆ ಸುಲಭವಾಯಿತು.
ಹಿರಿಯ ನಾಗರಿಕರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಅವರಿಗೆ ಆದಾಯ ಗಳಿಸುವ ಅವಕಾಶ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಅನುಭವ, ಪ್ರಬುದ್ಧತೆ, ಬದ್ಧತೆ ಮತ್ತು ವೃತ್ತಿಪರ ಕೌಶಲಗಳಿಂದ ಉದ್ಯೋಗದಾತರೂ ಪ್ರಯೋಜನ ಪಡೆಯಬಹುದು ಎಂದು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ರಾಧಾ ಎಸ್. ಮೂರ್ತಿ ಹೇಳಿದರು.
ಸಂದರ್ಶನಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಹೃದಯ-ಶ್ವಾಸಕೋಶ ಪುನಶ್ಚೇತನ (ಸಿಪಿಆರ್) ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸುವುದು, ಹಿರಿಯರ ನೆರವು ಸೇವೆಗಳ ಕುರಿತು ಮಾಹಿತಿ ಪಡೆಯುವುದು ಹಾಗೂ ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ‘ಬ್ರೈನ್ ಜಿಮ್’ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ಇತ್ತು.
ಹಿರಿಯ ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಉಚಿತ ಕಂಪ್ಯೂಟರ್ ತರಬೇತಿ, ಡಿಜಿಟಲ್ ಸಾಕ್ಷರತೆ ಮತ್ತು ವ್ಯಕ್ತಿತ್ವ ವಿಕಸನ ಕೌಶಲಗಳ ತರಬೇತಿಯನ್ನು ನೀಡುತ್ತಿದೆ.