

ಮಂಗಳೂರು: ದಸರಾ ರಜೆಯ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವುದನ್ನು ವಿರೋಧಿಸಿ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸೇಂಟ್ ಆಗ್ನೆಸ್ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಪೂರ್ಣ ಬೆಂಬಲ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
ಪರೀಕ್ಷೆ ಯಾವಾಗ?
ಮಂಗಳೂರು ದಸರಾ ಕರಾವಳಿ ಭಾಗದ ಪ್ರಮುಖ ಹಾಗೂ ಸಂಭ್ರಮದ ಹಬ್ಬವಾಗಿದೆ. ಈ ಹಬ್ಬದ ಸಂದರ್ಭದಲ್ಲೇ ಅಂದರೆ ಅಕ್ಟೋಬರ್ 12 ರಿಂದ ಅಕ್ಟೋಬರ್ 28 ರವರೆಗೆ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಕಾಲೇಜು ಆಡಳಿತ ಮಂಡಳಿಯು ನಿಗದಿಪಡಿಸಿದೆ. ಆದರೆ ವಿದ್ಯಾರ್ಥಿಗಳು, "ಹಬ್ಬದ ವೇಳೆಯೇ ಪರೀಕ್ಷೆ ಇಟ್ಟಿರುವುದರಿಂದ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗಲು ಮತ್ತು ಮನೆಯವರೊಂದಿಗೆ ಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ" ಎಂದು ದೂರಿದ್ದಾರೆ. ಅದರಲ್ಲೂ, ಕ್ರಿಸ್ಮಸ್ ಹಬ್ಬಕ್ಕೆ ರಜೆ ನೀಡುವ ಕಾಲೇಜು ಆಡಳಿತ ಮಂಡಳಿ, ದಸರಾ ಹಬ್ಬಕ್ಕೆ ರಜೆ ನೀಡದೆ ಉದ್ದಟತನ ಪ್ರದರ್ಶಿಸುತ್ತಿದೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ.
ಮುಂದುವರೆದು, ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳು ಪರೀಕ್ಷೆಯನ್ನು ಕೆಲ ದಿನಗಳ ಕಾಲ ಮುಂದೂಡುವಂತೆ ಕಾಲೇಜು ಮಂಡಳಿಗೆ ಮನವಿ ಮಾಡಿದ್ದರು. ಆದರೆ ಆಡಳಿತ ಮಂಡಳಿ ಇದಕ್ಕೆ ಸ್ಪಂದಿಸದೆ ಅದೇ ದಿನಾಂಕದಂದು ಪರೀಕ್ಷೆ ನಡೆಸಲು ಮುಂದಾಗಿದ್ದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ಜೊತೆಗೆ, ಪರೀಕ್ಷೆಯನ್ನು ತಕ್ಷಣವೇ ಮುಂದೂಡಿ ಹಬ್ಬದ ರಜೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿವೆ.
ಏತನ್ಮಧ್ಯೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ, ವಿದ್ಯಾರ್ಥಿನಿಯರು ಪೊಲೀಸ್ ವಾಹನಕ್ಕೆ ಅಡ್ಡ ನಿಂತು ತಡೆದಿದ್ದಾರೆ. ಸದ್ಯ ಪೊಲೀಸರು ಹಾಗೂ ಕಾಲೇಜು ಮಂಡಳಿ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸುತ್ತಿದೆಯಾದರೂ, ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವ ಹೊಸ ದಿನಾಂಕ ಪ್ರಕಟಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.